ಹುಬ್ಬಳ್ಳಿ: ಮನ್ವರ್ಷಿ ನವಲಗುಂದ ರಚನೆಯ ಸುಭಾಸ ಎನ್.ನರೇಂದ್ರ ಅರ್ಪಿಸುವ ಶ್ರೀಮತಿ ಸಿಂಧುತಾಯಿ ಸಪಕಾಳಿ ಅವರ ಜೀವನಾಧಾರಿತ ನಾಟಕ ‘ಅನಾಥರ ಮಾಯಿ’ ಇದೇ 07ರಂದು ಸಂಜೆ 6-30ಕ್ಕೆ ದೇಶಪಾಂಡೆನಗರದ ಸವಾಯಿ ಗಂಧರ್ವ ಹಾಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಾಟಕದ ನಿರ್ದೇಶಕರಾದ ಸುಭಾಸ ನರೇಂದ್ರ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮಕ್ಕಳಿಗೆ ತಮ್ಮ ತಮ್ಮ ತಾಯಿಯೇ ನಿಜವಾದ ದೇವತೆ ಆದರೇ ಅನಾಥ ಮಕ್ಕಳಿಗೆ ಸಿಂಧುತಾಯಿ ದೇವತೆಯಾಗಿ ತನ್ನ ಜೀವಿತಾವಧಿಯಲ್ಲಿ ಅಪಾರ ಪ್ರಮಾಣದ ಸೇವೆ ಸಲ್ಲಿಸಿದ್ದಾರೆ ಎಂದರು. ಕಡು ಬಡತನದಲ್ಲಿ ಬೆಳೆದು ಬಂದ ಸಿಂಧುತಾಯಿ ತನ್ನ ಹತ್ತು ವಯಸ್ಸಿನಲ್ಲಿಯೇ ಮದುವೆಯಾಗಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದ ಅವರು ಗ್ರಾಮದಲ್ಲಿ ನಡೆಯುವ ಅಕ್ರಮದ ವಿರುದ್ಧ ದ್ವನಿ ಎತ್ತಿರುವ ಗಂಭೀರ ವ್ಯಕ್ತಿತ್ವದ ಮಹಿಳೆ ಎಂಬ ಗೌರವ ಸಿಂಧುತಾಯಿ ಸಪಕಾಳಿ ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.ಸಿಂಧುತಾಯಿ ಅವರ ಕುರಿತು ಹಲವಾರು ಲೇಖನ, ಸಾಕ್ಷ್ಯಚಿತ್ರ, ಚಲನಚಿತ್ರ ರೂಪಗೊಂಡಿವೆ ಆದರೇ ರಂಗಭೂಮಿಯ ಮೂಲಕ ಸಿಂಧುತಾಯಿ ಸಪಕಾಳಿಯವರ ಜೀವನ ಚಿತ್ರಣವನ್ನು ಸಾರ್ವಜನಿಕರಿಗೆ ಉಣಬಡಿಸುವ ಸದುದ್ದೇಶದಿಂದ ನಾಟಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಅನಾಥರ ಮಾಯಿ ನಾಟಕದಲ್ಲಿ ಅವಳಿನಗರದ 20ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು ಅಭಿನಯಿಸುತ್ತಿದ್ದು, ಶ್ರೀಮತಿ ಸಿಂಧುತಾಯಿ ಸಪಕಾಳಿ ಪಾತ್ರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವೀಣಾ ಅಠವಾಲೆ ಅವರು ವಹಿಸಲಿದ್ದಾರೆ ಎಂದರು.ನಾಟಕದ ಉದ್ಘಾಟನೆಯನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ನೆರವೇರಿಸಲಿದ್ದಾರೆ. ನಾಟಕವು ಉಚಿತ ಪ್ರವೇಶವಿದ್ದು, ಎಲ್ಲರೂ ಹತ್ತು ನಿಮಿಷ ಮುಂಚೆ ಬನ್ನಿ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬಾನು ಪ್ರಕಾಶ, ಸುನೀಲ ನರೇಂದ್ರ, ಸಂಜೀವ ದುಮ್ಮಕನಾಳ, ವೀಣಾ ಅಠವಾಲೆ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





