ಆಷಾಢ ಮಾಸದ ಸಂಭ್ರಮದಲ್ಲಿ ಯುವತಿಯರುಚಾಮರಾಜನಗರ:ಆಷಾಢ ಮಾಸ ಬಂತೆಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಒಂದೆಡೆ ನವವಿವಾಹಿತ ಹೆಣ್ಣು ಮಗಳು ತಿಂಗಳ ಕಾಲ ತವರು ಮನೆಯಲ್ಲೆ ಇರುವ ಖುಷಿಯಾದ್ರೆ, ಇದೇ ಮಾಸದಲ್ಲಿ ಬರುವ ಆಷಾಢ ಶುಕ್ರವಾರದಂದು ಮುತ್ತೆದೆ ಸ್ಥಾನ ಗಟ್ಟಿಯಾಗಲೆಂದು ಚಾಮುಂಡೇಶ್ವರಿಗೆ ಪ್ರಾರ್ಥಿಸುವ ಸುವರ್ಣಾವಕಾಶ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರದ ಚಾಮರಾಜೇಶ್ವರ ಸನ್ನಿಧಿಯಲ್ಲೂ ಆಷಾಢ ಶುಕ್ರವಾರದ ವಿಶೇಷ ಪೂಜೆ ನಡೆಯಿತು. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಚಾಮರಾಜನಗರದ ಆರಾಧ್ಯ ದೇವತೆಯಾದ ಚಾಮರಾಜೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು. ಚಾಮರಾಜೇಶ್ವರ ದೇಗುಲದ ಆವರಣದಲ್ಲಿರುವ ಚಾಮುಂಡೇಶ್ವರಿಗೆ ಮಹಿಳಾ ಭಕ್ತರು ವಿಶೇಷ ಪೂಜೆ ಸಲ್ಲಿಸಿದ್ರು. ಅದರಲ್ಲೂ ಮದ್ವೆಯಾಗದ ಯುವತಿಯರು, ನವವಿವಾಹಿತ ಯುವತಿಯರು, ಮುತ್ತೈದೆಯರು ನಿಂಬೆಹಣ್ಣು, ತುಪ್ಪದ ದೀಪ ಹಚ್ಚಿ, ಪರಸ್ಪರ ಬಾಗಿನ ಅರ್ಪಿಸಿದರು. ಇನ್ನು ಆಷಾಢ ಶುಕ್ರವಾರದ ಕಾರಣಕ್ಕೆ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ಭಕ್ತಸಾಗರವೇ ನೆರೆದಿತ್ತು. ಮದ್ವೆಯಾಗಿಲ್ಲದ ಹೆಣ್ಣು ಮಕ್ಕಳು ಕಂಕಣ ಭಾಗ್ಯ ಬೇಗ ಕೂಡಿ ಬರಲಿ ಎಂದು ಚಾಮುಂಡೇಶ್ವರಿಗೆ ನಿಂಬೆಹಣ್ಣು ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿದ್ರೆ, ಈಗಾಗಲೇ ವಿವಾಹಿತರಾಗಿರುವ ಸ್ತಿಯರು ಮುತ್ತೈದೆ ಭಾಗ್ಯ ದೀರ್ಘಕಾಲ ಇರಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ರು. ಹೀಗಾಗಿ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಚಾಮರಾಜೇಶ್ವರ ಮತ್ತು ಚಾಮುಂಡೇಶ್ವರಿಗೆ ಆಶೀರ್ವಾದ ಬೇಡಿದರು..ಒಟ್ಟಾರೆ ಇಂದು ದೇಶಾದ್ಯಂತ ಆಷಾಢ ಮಾಸದ ಪ್ರಯುಕ್ತ ಮೊದಲ ಶುಕ್ರವಾರದ ಪೂಜೆ ನಡೆಯುತ್ತಿದೆ. ಅದರಲ್ಲೂ ಶಕ್ತಿದೇವತೆ ಎನಿಸಿರುವ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷವಾಗಿ ಪೂಜೆಗಳು ನಡೆಯುತ್ತವೆ. ಅದರಂತೆ ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಚಾಮುಂಡಿ ದೇವಿಗೂ ಮಹಿಳೆಯರು ಪ್ರತಿವರ್ಷದಂತೆ ಇಂದೂ ಸಹ ವಿಶೇಷ ಪೂಜೆ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





