ಕೊಪ್ಪಳ: ನಿರುದ್ಯೋಗದ ಸಮಸ್ಯೆ ಕುರಿತಂತೆ ರಾಹುಲ್ ಗಾಂಧಿ ಭಾರತದಲ್ಲಿ ಮಾತನಾಡಬೇಕೇ ಹೊರತು ಇರಾನ್, ಇರಾಕ್ನಲ್ಲಿ ಅಲ್ಲ. ಬಿಜೆಪಿ ಹುಚ್ಚಾಸ್ಪತ್ರೆ ಎಂದು ಬಿ.ಕೆ. ಹರಿಪ್ರಸಾದ್ ಅವರು ನೀಡಿರುವ ಹೇಳಿಕೆ ರಾಹುಲ್ ಗಾಂಧಿಗೆ ಅನ್ವಯಿಸುತ್ತದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಕೊಪ್ಪಳ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಬುದ್ಧಿಜೀವಿ ಎಂದುಕೊಂಡಿದ್ದೆವು. ಆದರೆ, ಪ್ರಾಕ್ಟಿಕಲ್ ನಾಲೇಜ್ ಇಲ್ಲ. ಅವರಿಗೇನು ಗೊತ್ತು? ನಮ್ಮ ಹಾಗೆ ಅವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಬೆಂಗಳೂರಿನಿಂದ ನೇರವಾಗಿ ದೆಹಲಿಗೆ ಹೋಗ್ತಾರೆ. ಅಲ್ಲೊಂದಿಷ್ಟು ಲಾಬಿ ಮಾಡಿಕೊಂಡು ರಾಜ್ಯಸಭೆ ಮೆಂಬರ್ ಆಗ್ತಾರೆ. ಅಲ್ಲಿ ಒಂದಿಷ್ಟು ಪುಸ್ತಕ ಓದಿಕೊಂಡು ಬುದ್ಧಿಜೀವಿಯಂತೆ ಮಾತಾಡ್ತಾರೆ. ಬಿ.ಕೆ.ಹರಿಪ್ರಸಾದ್ ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ನಾಲಿಗೆ ಹರಿಬಿಟ್ಟು ಮಾತಾಡೋದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
ಇನ್ನು ರಾಹುಲ್ ಗಾಂಧಿ ನಿರುದ್ಯೋಗ ಸಮಸ್ಯೆಯನ್ನು ಭಾರತದಲ್ಲಿ ಮಾತನಾಡಬೇಕು. ಅದು ಬಿಟ್ಟು ಇರಾನ್, ಇರಾಕ್ನಲ್ಲಿ ಅಲ್ಲ. ಅಲ್ಲದೆ, ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ಹುಚ್ಚಾಸ್ಪತ್ರೆ ಎಂದು ನೀಡಿರುವ ಹೇಳಿಕೆ ಅವರ ರಾಹುಲ್ ಗಾಂಧಿಗೆ ಅನ್ವಯಿಸುತ್ತದೆ ಎಂದರು. ಇನ್ನು ರೇವಣ್ಣ ಸಂಸ್ಕಾರವಿಲ್ಲದವರು. ಮಾಜಿ ಪ್ರಧಾನಿ ದೇವೇಗೌಡರ ಪುತ್ರರು ಈ ರೀತಿಯಾಗಿ ಸಂಸ್ಕಾರವಿಲ್ಲದವರ ಹಾಗೆ ವರ್ತನೆ ಮಾಡಬಾರದು. ಜನರ ಬಳಿ ಯಾವ ರೀತಿ ವರ್ತಿಸಬೇಕು ಎಂಬ ಸಂಸ್ಕಾರವಿಲ್ಲ ಅವರಿಗೆ. ಕೊಡಗಿನ ನಿರಾಶ್ರಿತ ಜನರಿಗೆ ಬಿಸ್ಕೆಟ್ ಎಸೆಯುತ್ತಾರೆ. ಒಬ್ಬ ಮಾಜಿ ಪ್ರಧಾನಿ ಮಕ್ಕಳಿಗೆ ಸಂಸ್ಕಾರವಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.
ಕೊಡಗಿನ ವಿಷಯದಲ್ಲಿ ಆ ಭಾಗದ ಸಂಸದ ಪ್ರತಾಪ ಸಿಂಹ, ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿಯ ಅನೇಕರು ಭೇಟಿ ನೀಡಿ ನೆರವಾಗಿದ್ದಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ತಡವಾಗಿ ಭೇಟಿ ನೀಡಿದ್ದಾರೆ. ಅವರು ಲೇಟ್ ಕಮ್ಮರ್. ಅಲ್ಲಿಗೆ ಹೋಗಿರೋದೆ ಲೇಟಾಗಿ. ಒಂದು ಗಂಟೆಯಲ್ಲಿ ಅಲ್ಲಿಂದ ವಾಪಾಸ್ಸಾಗುವವರಿದ್ದರು. ಆದರೆ, ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಮನಸು ಬದಲಾಯಿಸಿಕೊಂಡು ಒಂದು ದಿನ ಅಲ್ಲಿ ಉಳಿದುಕೊಂಡರು. ಈಗ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪ ಮಾಡ್ತಿದ್ದಾರೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಎನ್ಡಿಆರ್ಎಫ್ನಲ್ಲಿ ಅನುದಾನ ಪಡೆಯಲು ಅಲ್ಲಿ ಆಗಿರುವ ಹಾನಿಯ ಆಸ್ತಿಪಾಸ್ತಿ, ಬೆಳೆ ಹಾಗೂ ಜೀವಹಾನಿ ಸೇರಿದಂತೆ ವಿವಿಧ ರೀತಿಯ ಹಾನಿಯ ಬಗ್ಗೆ ವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕಾಗಿತ್ತು. ನರೇಂದ್ರ ಮೋದಿ ಅವರು ಹಣವನ್ನು ನೀಡುವುದಿಲ್ಲ ಎಂದೇನು ಹೇಳಿಲ್ಲ. ಆ ಅನುದಾನ ಪಡೆಯಲು ರಾಜ್ಯ ಸರ್ಕಾರ ಏನು ಮಾಡಬೇಕಾಗಿತ್ತೋ ಆ ಕೆಲಸವನ್ನು ಮಾಡದೆ ಕೇಂದ್ರದ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳುತ್ತಿದೆ. ಆದರೆ, ಇನ್ನೂ ಆದೇಶ ಬ್ಯಾಂಕ್ ತಲುಪಿಲ್ಲ. ಒಬ್ಬೇ ಒಬ್ಬ ರೈತರ ಸಾಲ ಮನ್ನಾ ಆಗಿರೋದು ತೋರಿಸಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿ.ಶ್ರೀರಾಮುಲು ಇದೇ ಸಂದರ್ಭದಲ್ಲಿ ಸವಾಲ್ ಹಾಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





