2013ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸ್ಟ್ಯಾಚೂ ಆಫ್ ಯೂನಿಟಿ ನಿರ್ಮಾಣ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಇದೀಗ ಅದು ಪೂರ್ಣ ಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟನೆ ಮಾಡುತ್ತಿದ್ದಾರೆ..!ನೋಯ್ಡಾ ಮೂಲದ ಶಿಲ್ಪಿ ರಾಮ್. ವಿ. ಸುತರ್ ಈ ಪ್ರತಿಮೆ ವಿನ್ಯಾಸಗೊಳಿಸಿದ್ದಾರೆ. ಪ್ರತಿಮೆಯು ಸರ್ದಾರ್ ಪಟೇಲ್ ಅವರ ಮುಖವನ್ನು ಹೋಲಬೇಕೆಂಬ ನಿಟ್ಟಿನಲ್ಲಿ ಸುತರ್ ಅವರು ಹೆಚ್ಚಿನ ಕಾಳಜಿ ವಹಿಸಿದ್ದರು. ಇದಕ್ಕಾಗಿ ಪಟೇಲ್ರ ಸುಮಾರು 2 ಸಾವಿರ ಫೋಟೋಗಳನ್ನ ಅಧ್ಯಯನ ಮಾಡಿದ್ದರು. ಸರ್ದಾರ್ ಪಟೇಲ್ರನ್ನ ನೇರವಾಗಿ ನೋಡಿದ್ದ ಇತಿಹಾಸಕಾರರು ಹಾಗು ಜನರನ್ನು ಕೂಡ ಭೇಟಿ ಮಾಡಿದ್ದರು. ಈ ಪ್ರತಿಮೆಯನ್ನ ದೂರದಿಂದ ನೋಡಿದರೆ ಸರ್ದಾರ್ ಪಟೇಲ್ ಅವರು ನೀರಿನಲ್ಲಿ ನಡೆದುಕೊಂಡು ಸರ್ದಾರ್ ಸರೋವರ್ ಡ್ಯಾಮ್ನತ್ತ ಬರುತ್ತಿರುವಂತೆ ಕಾಣುತ್ತದೆ.ಸುಮಾರು ₹2,989 ಕೋಟಿ ವೆಚ್ಚದಲ್ಲಿ ಎಲ್&ಟಿ ಸಂಸ್ಥೆ ಸರ್ದಾರ್ ಪಟೇಲ್ರ ಪ್ರತಿಮೆಯನ್ನ ನಿರ್ಮಾಣ ಮಾಡಿದೆ. ಇದಕ್ಕಾಗಿ 1700 ಟನ್ ಕಂಚು ಬಳಸಲಾಗಿದೆ. ಹಾಗೇ 1850 ಟನ್ ಕಂಚಿನಿಂದ ಪ್ರತಿಮೆ ಮೇಲೆ ಲೇಪನ ಮಾಡಲಾಗಿದೆ. ಪ್ರತಿಮೆಯ ಒಳಭಾಗ ಕಾಂಕ್ರೀಟ್ ಸಿಮೆಂಟ್, ಸ್ಟೀಲ್ ಹಾಗೂ ಸ್ಟ್ರಕ್ಚರ್ಡ್ ಸ್ಟೀಲ್ನಿಂದ ಕೂಡಿದೆ. ಒಂದು ವೇಳೆ ನೀವು 5.6 ಅಡಿ ಎತ್ತರವಿದ್ದರೆ ಈ ಪ್ರತಿಮೆ ನಿಮಗಿಂತ 100 ಪಟ್ಟು ದೊಡ್ಡದಾಗಿದೆ. ಅಲ್ಲಿಗೆ ಈ ಪ್ರತಿಮೆ ಎಷ್ಟು ಎತ್ತರದ್ದು ಎಂದು ನೀವು ಊಹಿಸಬಹುದು.ಇನ್ನು ಈ ಪ್ರತಿಮೆ ನಿರ್ಮಾಣಕ್ಕೆ ಸಾಕಷ್ಟು ಸವಾಲುಗಳಿದ್ದವು. ಪ್ರತಿಮೆಯ ಎತ್ತರವೊಂದೇ ಅಲ್ಲ, ನರ್ಮದಾ ನದಿಯ ಮಧ್ಯೆ, ಅದೂ ನಡೆದುಕೊಂಡು ಬರುತ್ತಿರುವ ಪೋಸ್ನಲ್ಲಿ ಪ್ರತಿಮೆ ನಿರ್ಮಾಣ ಮಾಡುವುದೇ ದೊಡ್ಡ ಸವಾಲಾಗಿತ್ತು. ಇದೀಗ ಎಲ್ಲಾ ಸವಾಲುಗಳನ್ನ ದಾಟಿ ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಗಂಟೆಗೆ 180 ಕಿ.ಮೀ ವೇಗದಲ್ಲಿ ಗಾಳಿ ಬೀಸಿದರೂ, 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ಅದನ್ನು ತಡೆಯುವ ಸಾಮರ್ಥ್ಯ ಈ ‘ಉಕ್ಕಿನ ಮನುಷ್ಯ’ನ ಪ್ರತಿಮೆಗೆ ಇದೆ ಎನ್ನುವುದು ಭಾರತದ ಮತ್ತೊಂದು ಹೆಮ್ಮೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





