
ಶಿರಹಟ್ಟಿ: ವಾಯುಭಾರ ಕುಸಿತದಿಂದ ಉಂಟಾದ ಅಕಾಲಿಕವಾಗಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ರವಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ತಾಲೂಕಿನ ತಂಗೋಡ, ತೊಳಲಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಾನಿಗೊಳಗಾದ ಬೆಳೆಯ ಸ್ಥಳ ಪರಿಶೀಲನೆಯನ್ನು ತಹಶೀಲ್ದಾರ ನೇತೃತ್ವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ನಿಖರ ವರದಿ ನೀಡಬೇಕು. ಅಲ್ಲದೆ ಮಳೆಯಿಂದ ಹಾನಿಗೊಳಗಳಾದ ಮನೆಗಳ ಮಾಹಿತಿಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಂಚಾಯಿತ ಅಭಿವೃದ್ದಿ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ಮಾಡಿ ವರದಿ ನೀಡಬೇಕೆಂದು ಸೂಚಿಸಿದರು.
ಹಾನಿಗೊಳಗಾದ ಮನೆ ಮತ್ತು ಜಮೀನಿನ ಸಮೀಕ್ಷೆ ವರದಿಗಳನ್ನು ಅತೀ ಶೀಘ್ರವಾಗಿ ನೀಡಬೇಕಿದ್ದು, ಹಾನಿಗೊಳಗಾದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರದ ಸುತ್ತೋಲೆ ಪ್ರಕಾರ ಅವರಿಗೆ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇದಕ್ಕೆ ಸಂಬಂಧಪಟ್ಟ ತಹಶೀಲ್ದಾರ, ಕೃಷಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರಿಯಾದ ಸಮೀಕ್ಷೆಯೊಂದಿಗೆ ಆದಷ್ಟು ಬೇಗನೆ ವರದಿ ಸಲ್ಲಿಸಬೇಕೆಂದು ನಿರ್ದೇಶನ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷಬಾಬು, ಕಂದಾಯ ನಿರೀಕ್ಷಕ ಮಾಂತೇಶ ಮುಗದುಮ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮಲೆಕ್ಕಾಧಿಕಾರಿಗಳು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





