ಬೆಳಗಾವಿ: ಶಿಕ್ಷಣ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದ ಹೊಸ ನಿವೇಶನದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಇಂದಿನ ಸವಾಲುಗಳ ಹಾಗೂ ಬದಲಾವಣೆಯ ಯುಗಕ್ಕೆ ಹೊಂದಿಕೊಳ್ಳುವ ಶಿಕ್ಷಣ ವ್ಯವಸ್ಥೆ ಅತ್ಯಂತ ಅವಶ್ಯಕ ಎಂದರು.

ಪಠ್ಯದಲ್ಲಿರುವ ವಿದ್ಯೆ ಹಾಗೂ ಜಗತ್ತಿನಲ್ಲಿ ಬಳಕೆಯಾಗುತ್ತಿರುವ ವಿದ್ಯೆಯಲ್ಲಿ ಬಹಳಷ್ಟು ಅಂತರ ಇದೆ. ಇವರೆಡರ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಲು ಎನ್‌ಇಪಿಯನ್ನು ಜಾರಿಗೊಳಿಸಲಾಗಿದೆ. ಇಂದಿನ ಪೀಳಿಗೆ ಯಾವುದೇ ಸವಾಲುಗಳನ್ನು ಆತ್ಮಸ್ಥೈರ್ಯ, ಧೈರ್ಯದಿಂದ ಎದುರಿಸಲು ಜ್ಞಾನದ ಬಲ ಇರಬೇಕು. ಎನ್‌ಇಪಿ ಈ ಜ್ಞಾನದ ಬಲವನ್ನು ನೀಡುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಲಿ:
ಕಿತ್ತೂರು ರಾಣಿ ಚೆನ್ನಮ್ಮ ಆತ್ಮಸ್ಥೈರ್ಯ, ಧೈರ್ಯದಿಂದ ಹೋರಾಡಿದ ಮೊದಲನೆಯ ಮಹಿಳಾ ಸ್ವತಂತ್ರ ಹೋರಾಟಗಾರ್ತಿ. ರಾಣಿ ಚೆನ್ನಮ್ಮನೇ ಈ ವಿಶ್ವವಿದ್ಯಾಲಯದ ಸ್ಫೂರ್ತಿ. ಈ ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಬದ್ಧತೆ, ಸ್ಪಷ್ಟತೆ ವಿಶ್ವವಿದ್ಯಾಲಯದ ಪ್ರತಿಯೊಬ್ಬರಿಗೂ ಇರಬೇಕು ಎಂದರು.

ತರ್ಕಬದ್ಧ ಚಿಂತನೆಗೆ ಅವಕಾಶ:
ವಿಶ್ವವಿದ್ಯಾಲಯಗಳು ತರ್ಕಬದ್ಧ ಚಿಂತನೆಗೆ ಅವಕಾಶ ನೀಡುವ ಜ್ಞಾನದ ಕೇಂದ್ರವಾಗಬೇಕು. ವಿದ್ಯಾರ್ಜನೆಗೆ ಪೂರಕವಾದ ಪರಿಸರ ವಿಶ್ವವಿದ್ಯಾಲಯದಲ್ಲಿ ದೊರೆಯಬೇಕು. ವಿಶ್ವವಿದ್ಯಾಲಯದಲ್ಲಿರುವವರು ತಮ್ಮ ಸೀಮಿತ ಪ್ರಪಂಚದಿಂದ ಹೊರಗೆ ಬರಬೇಕು. ಸಂಶೋಧನೆಗಳನ್ನು ಸಮರ್ಥಿಸಿಕೊಳ್ಳದೆ ಉಳಿದವರು ಅದರ ಉಪಯುಕ್ತತೆಯನ್ನು ನಿರ್ಧರಿಸಲಿ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳೆ ಮುಂದಾಳತ್ವ ವಹಿಸುವ ನಾಯಕ. ಅವರು ಇತರರಿಗೆ ಉದಾಹರಣೆಯಾಗಬೇಕು. ಮಾರ್ಗದರ್ಶನ ತೋರಬೇಕು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಲು ಸರ್ಕಾರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

