ಶಿಕಾಗೋ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟೀವ್ ಕಂಡುಬಂದ ಹಿನ್ನೆಲೆಯಲ್ಲಿ ಆಕೆ ಶೌಚಾಲಯದಲ್ಲೇ ಐಸೊಲೇಟ್ ಆದ ವಿಲಕ್ಷಣ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ.
ಶಿಕಾಗೋದಿಂದ ಐಸ್ಲ್ಯಾಂಡ್ ಗೆ ತೆರಳುತ್ತಿದ್ದ ಮಹಿಳೆಗೆ ಮಾರ್ಗಮಧ್ಯೆ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಿತ್ತು.
ಆದ ಕಾರಣ ಆಕೆ ಸತತ ಮೂರು ಗಂಟೆಗಳ ಕಾಲ ಶೌಚಾಲಯದಲ್ಲೇ ಐಸೊಲೇಟ್ ಆಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಿಚಿಗನ್ ನಲ್ಲಿ ಶಿಕ್ಷಕಿಯಾಗಿರುವ ಮಾರಿಸಾ ಫೋಟಿಯೊ, ವಿಮಾನ ಪ್ರಯಾಣದ ಮಾರ್ಗಮಧ್ಯದಲ್ಲಿರಬೇಕಾದರೆ ಆಕೆಗೆ ಗಂಟಲು ಬೇನೆ ಬಾಧಿಸಲು ಪ್ರಾರಂಭಿಸಿದೆ. ಆದ್ದರಿಂದ ಆಕೆ ತಕ್ಷಣ ಶೌಚಾಲಯಕ್ಕೆ ತೆರಳಿ ರ್ಯಾಪಿಡ್ ಕೋವಿಡ್-19 ಪರೀಕ್ಷೆ ಮಾಡಿಕೊಂಡಿದ್ದಾರೆ. ಈ ಕ್ಷಿಪ್ರ ಪರೀಕ್ಷೆಯಲ್ಲಿ ಆಕೆಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಡಬ್ಲ್ಯುಎಬಿಸಿ-ಟಿವಿ ವರದಿ ಪ್ರಕಟಿಸಿದೆ.
ವಿಮಾನದಲ್ಲಿ ತೆರಳುವುದಕ್ಕೂ ಮುನ್ನ ಫೋಟಿಯೊ ಅವರು ಎರಡು ಪಿಸಿಆರ್ ಪರೀಕ್ಷೆಗಳಿಗೆ ಒಳಪಟ್ಟಿದ್ದರು ಹಾಗೂ ಐದು ಬಾರಿ ರ್ಯಾಪಿಡ್ ಪರೀಕ್ಷೆ ಮಾಡಿಕೊಂಡಿದ್ದರು. ಎಲ್ಲದರಲ್ಲೂ ಕೋವಿಡ್-19 ನೆಗೆಟೀವ್ ಬಂದಿತ್ತು. ಆದರೆ ವಿಮಾನವೇರಿದ ಒಂದೂವರೆಗಂಟೆಗಳಲ್ಲಿ ಆಕೆಗೆ ಗಂಟಲು ಬೇನೆ ಬಾಧಿಸಲು ಪ್ರಾರಂಭವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

