ಬಳ್ಳಾರಿ: ನೂರಾರು ಸಂಖ್ಯೆಯಲ್ಲಿದ್ದ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರ ನಡುವೆ ಇಲ್ಲಿನ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಹುಟ್ಟುಹಬ್ಬದ ವೇಳೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದರೂ ಕಾನೂನು ಕ್ರಮ ಕೈಗೊಳ್ಳದೆ ಜಿಲ್ಲಾಡಳಿತ ‘ಕಣ್ಣಿದ್ದು ಕುರುಡುತನ’ ಪ್ರದರ್ಶಿಸುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ.
ಸಾರಿಗೆ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರದ ಶಾಸಕ ಸೋಮಶೇಖರರೆಡ್ಡಿ, ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಾಲಣ್ಣ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಈ ಸಮಯದಲ್ಲಿ ಅನೇಕರು ಮಾಸ್ಕ್ ಹಾಕಿರಲಿಲ್ಲ. ಪರಸ್ಪರ ಅಂತರ ಕಾಪಾಡಲಿಲ್ಲ ಧಾರ್ಮಿಕ ಇಲಾಖೆ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರೂ ಕ್ರಮ ಕೈಗೊಂಡಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
‘ಜನಾರ್ದನರೆಡ್ಡಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಕೋವಿಡ್ ನಿಯಯ ಉಲ್ಲಂಘಿಸಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದಾಗ್ಯೂ ರಾಜಕೀಯ ಭಾಷಣ ಮಾಡಿದ್ದಾರೆ. ಕೋರ್ಟ್ ಕಟ್ಟುಪಾಡಿಗಳಿಗೆ ಬೆಲೆ ಕೊಡದೆ ಮುಕ್ತವಾಗಿ ಓಡಾಡುವ ಮೂಲಕ ಮತ್ತೊಮ್ಮೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಲು ಹೊರಟಿದ್ದಾರೆ’ ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

