ಚಿಂತಾಮಣಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ಪತ್ನಿ ಹಾಗೂ ನಾದಿನಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ಚಿಂತಾಮಣಿ ನಗರದ ಜೆ.ಜೆ. ಕಾಲೋನಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಮೃತರನ್ನು ಶಮಾ (25) ಮತ್ತು ಆಕೆಯ ತಂಗಿ ರೇಷ್ಮಾ (18) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ಎಜಾಜ್ (30) ಬಳಿಕ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ದಂಪತಿಗಳ ನಡುವೆ ಕಳೆದ ಮೂರು ತಿಂಗಳಿನಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ನಡೆದ ಜಗಳ ವಿಕೋಪಕ್ಕೆ ತಿರುಗಿದಾಗ ಎಜಾಜ್ ಪತ್ನಿ ಹಾಗೂ ನಾದಿನಿಯನ್ನು ಹತ್ಯೆಗೈದು, ಮನೆಯಲ್ಲಿದ್ದ ಮೂವರು ಮಕ್ಕಳನ್ನು ಕರೆದುಕೊಂಡು ಕೋಲಾರಕ್ಕೆ ತೆರಳಿದ್ದಾನೆ. ಬಳಿಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಪೊಲೀಸ್ ಠಾಣೆಗೆ ತೆರಳಿ ತಾನೇ ಶರಣಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

