ಮಂಡ್ಯ: ಕ್ರಿಕೆಟ್ ಬೆಟ್ಟಿಂಗ್ ವ್ಯಸನದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ 27 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಕೆ.ಆರ್.ಪೇಟೆ ತಾಲೂಕಿನ ಕಿರಣ್ ಮೃತ ಯುವಕನಾಗಿದ್ದು, ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಬಳಿಯ ವಿಸಿ ನಾಲೆಗೆ ಹಾರಿ ಜೀವ ಕಳೆದುಕೊಂಡಿದ್ದಾನೆ. ಐಪಿಎಲ್ ಸೇರಿದಂತೆ ವಿವಿಧ ಕ್ರಿಕೆಟ್ ಪಂದ್ಯಗಳ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಕಿರಣ್, ಲಕ್ಷಾಂತರ ರೂಪಾಯಿ ಕಳೆದುಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದೆ. ಸಾಲಗಾರರ ಒತ್ತಡದಿಂದ ಮಾನಸಿಕವಾಗಿ ನೊಂದಿದ್ದ ಆತ, ಆತ್ಮಹತ್ಯೆಗೂ ಮುನ್ನ ತಾನು ಇದ್ದ ಸ್ಥಳದ ವಿಡಿಯೋವನ್ನು ತಂದೆಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ. ವಿಡಿಯೋ ನೋಡಿದ ಪೋಷಕರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಿರಣ್ ನಾಲೆಗೆ ಹಾರಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮೃತದೇಹವನ್ನು ಹೊರತೆಗೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

