ಬೆಂಗಳೂರು : ಕಾಂಗ್ರೆಸ್‌ನವರಿಗೆ 80 ಕ್ಷೇತ್ರದಲ್ಲಿ ಅಭ್ಯರ್ಥಿಗಳಿಲ್ಲ. ನಾನು ಅಲ್ಲಿಯೇ ಇದ್ದವನು, ಹಳೆ ಹೆಂಡಂದಿರ ಬಗ್ಗೆ ನಮಗೆ ಗೊತ್ತಿಲ್ಲವೇ? ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ನಾವು ಹನುಮಂತನಂತೆ ಹೊತ್ತುಕೊಂಡು ಹೋಗುತ್ತಿದ್ದೆವು. ಈಗ ಹೊತ್ತುಕೊಂಡು ಹೋಗುವವರು ಯಾರಿಲ್ಲ. ಪಾಪ ಅವರನ್ನು ಓಡಿಸಿಬಿಟ್ಟರು. ಅವರಿಗೆ ಸ್ಟೆಂಟ್ ಹಾಕಿದ್ದಾರೆ. ಇರುವ ಆರೋಗ್ಯ ಎಲ್ಲಿ ಹಾಳಾಗುತ್ತೋ ಎಂದು ನನಗೆ ಗಾಬರಿಯಾಗಿತ್ತು. ಸದ್ಯ ವೇಣುಗೋಪಾಲ ಬಂದು ಹಿಡಿದುಕೊಂಡರು. ಸಿದ್ದರಾಮಯ್ಯ ಅವರ ಆರೋಗ್ಯ ಚೆನ್ನಾಗಿರಲಿ ಎನ್ನುವವರಲ್ಲಿ ನಾನು ಮೊದಲಿಗ.
ಅವರು ಚುನಾವಣೆಗೆ ವರುಣದಿಂದಾದರೂ ಸರಿ, ಎಲ್ಲಿಂದ ಆದರೂ ಸರಿ ಸ್ಪರ್ಧೆ ಮಾಡಲಿ. ಅವರು ವಿಧಾನಸಭೆಗೆ ಬರಬೇಕು ಎಂದು ಆಶಿಸಿದರು. ಹಿಂದಿ ಬಳಕೆಗೆ ಒತ್ತು ನೀಡುವ ಸಂಬಂಧ ರಾಷ್ಟ್ರಪತಿಗೆ ಗೃಹಸಚಿವ ಅಮಿತ್ ಶಾ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಸ್ಸಾಂ, ಗುಜರಾತ್, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ ಹೀಗೆ ಹಲವು ಕಡೆ ಹಿಂದಿಯೇ ಇಲ್ಲ. ಇವರು ಇದೇ ರೀತಿ ಮುಂದುವರಿದರೆ ದೇಶ ವಿಭಜನೆಗೆ ಕೈಹಾಕುವಂತಹ ಕೆಲಸ ಮಾಡುತ್ತಿದ್ದಾರೆ. ಹಲವು ಭಾಷೆಗಳಿಂದ ಕೂಡಿರುವ ಭಾರತ ನಮ್ಮದು. ಹೀಗಾಗಿ ನವೆಂಬರ್ 1ರಂದು ಮನೆ ಮನೆಗೂ ಕನ್ನಡ ಬಾವುಟ ಹಾರಿಸಿ ಎಂದು ಕರೆ ನೀಡಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

