ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ‘ಶಕ್ತಿ’ ಯೋಜನೆಯಡಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು ಈವರೆಗೆ ಸಂಚರಿಸಿರುವ ಟಿಕೆಟ್ ಮೌಲ್ಯ ₹1,000 ಕೋಟಿ ದಾಟಿದೆ. ಜೊತೆಗೆ ಆರ್ಥಿಕ ಇಲಾಖೆಯು ಸಾರಿಗೆ ನಿಗಮಗಳು ನಷ್ಟಕ್ಕೆ ಸಿಲುಕದಂತೆ ತಡೆಯಲು ಪ್ರತಿ ತಿಂಗಳು ಮರು ಪಾವತಿಗೆ ಸಹಮತ ನೀಡಿದೆ.
ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದ ಆ.20ರವರೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ನಿಗಮಗಳ ಬಸ್‌ಗಳಲ್ಲಿ 78.21 ಕೋಟಿ ಜನರು ಪ್ರಯಾಣಿಸಿದ್ದು, ಅದರಲ್ಲಿ 43.03 ಕೋಟಿ ಮಹಿಳೆಯರು. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ₹ 1,000.37 ಕೋಟಿಯಾಗಿದೆ.
ಶಕ್ತಿ ಯೋಜನೆ ಜಾರಿಯಾಗುವವರೆಗೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ನಿತ್ಯ 84.5 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಕ್ಕಿದ ಬಳಿಕ ನಿತ್ಯ ಪ್ರಯಾಣಿಸುವವರ ಸರಾಸರಿ ಪ್ರಮಾಣ 1.10 ಕೋಟಿಗೆ ಏರಿದೆ. ಅದರಲ್ಲಿ 60 ಲಕ್ಷದಷ್ಟು (ಶೇ 55) ಮಹಿಳೆಯರು. ನಿತ್ಯ ಮಹಿಳೆಯರು ಓಡಾಡಿದ ಟಿಕೆಟ್‌ಗಳ ಮೌಲ್ಯ ₹14 ಕೋಟಿಯಾಗಿದೆ.
ಜುಲೈಯಿಂದ ನವೆಂಬರ್‌ವರೆಗೆ ಪ್ರತಿ ತಿಂಗಳು ಆಡಳಿತ ಇಲಾಖೆಯಿಂದ ಸಾರಿಗೆ ಸಂಸ್ಥೆಗಳಿಗೆ ₹294.74 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸಮ್ಮತಿ ಸೂಚಿಸಿದೆ.
ಸಾರಿಗೆ ಸಚಿವ ಹೇಳಿದ್ದೇನು?: ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆ ಜಾರಿಗೆ ಬಂದಿದ್ದರಿಂದ ಮಹಿಳೆಯರಿಗೆ ಹಿಂಜರಿಕೆ ಇಲ್ಲದೇ ಬೇಕಾದಲ್ಲಿ ಹೋಗುವ ಸಾಮರ್ಥ್ಯ ಬಂದಿದೆ. ಈ ಯೋಜನೆಯ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಯಶಸ್ವಿಯಾಗಿ ನಡೆಯುತ್ತಿದೆ. ಉಚಿತ ಪ್ರಯಾಣದ ಮೊತ್ತವನ್ನು ಸರ್ಕಾರವು ಸಾರಿಗೆಯ ನಾಲ್ಕು ನಿಗಮಗಳಿಗೆ ಪಾವತಿ ಮಾಡಲಿದೆ ಎಂದರು
bigtvnews | Hubli Dharwad News | Kannada News | Karnataka News Hubli News | News In Hubli | Local news





