ಹುಬ್ಬಳ್ಳಿಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ. ಗಂಡ ಹೆಂಡತಿಯ ಜಗಳ ದುರಂತದಲ್ಲಿ ಅಂತ್ಯವಾಗಿದ್ದು ಎರಡು ಮಕ್ಕಳನ್ನು ಅನಾಥವಾಗಿಸಿದೆ. ಅಷ್ಟಕ್ಕೂ ಜೋಡಿ ಸಾವಿನ ರಹಸ್ಯವೇನು ಅಂತಾ ತೋರಿಸ್ತೀವಿ ನೋಡಿ. ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವ ವ್ಯಕ್ತಿಯ ಶವ. ಅಲ್ಲೇ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆಯ ಮೃತದೇಹ.ಮುಗಿಲು ಮುಟ್ಟಿರುವ ಕುಟುಂಬಸ್ಥರ ಆಕ್ರಂಧನ.ಆತಂಕದಲ್ಲಿ ಎಲ್ಲವನ್ನೂ ನೋಡುತ್ತಿರುವ ಸ್ಥಳೀಯರು.
ಈ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಕಟಕರ ಓಣಿಯಲ್ಲಿ. ಇಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ವ್ಯಕ್ತಿಯ ಹೆಸರು ಮಲೀಕ್ ಬೇಪಾರಿ. ಈ ವ್ಯಕ್ತಿ ಆತಹತ್ಯೆಗೂ ಮೊದಲು ಮಾಡಿದ್ದ ಕೆಲಸವೆಂದರೆ ಪತ್ನಿಯ ಕೊಲೆ. ಪತ್ನಿ ಶಾಹಿಸ್ತಾಬಾನುಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ಈತ,ನಂತರ ಅದೇ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. 
ಏಕೆಂದರೆ ಈತ ಬೇರೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಮನೆ ನಡೆಸಲು ದುಡಿಮೆ ಮಾಡು ಎಂದು ಒತ್ತಾಯಿಸುತ್ತಿದ್ದು ಪತ್ನಿಯ ಕೊಲೆಗೆ ಕಾರಣವಂತೆ. ಏನಾದರು ದುಡಿದು ತಾ ಎಂದು ಮಲೀಕ್‌ಗೆ ಪತ್ನಿ ಶಾಹಿಸ್ತಾಬಾನು ಒತ್ತಾಯಿಸುತ್ತಿದ್ದಳು . ಆದರೆ ಉಂಡಾಡಿ ಗುಂಡನಂತೆ ಓಡಾಡುತ್ತಿದ್ದ ಈತ ಮೈಬಗ್ಗಿಸಿ ದುಡಿಮೆ ಮಾಡಲು ಸುತಾರಾಮ್ ತಯಾರು ಇರ್ಲಿಲ್ವಂತೆ.
ಹೀಗಾಗಿ ಗಂಡಹೆಂಡತಿ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಇಂದು ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಶಾಹಿಸ್ತಾಬಾನು ಮೊದಲ ಗಂಡ ತೀರಿಕೊಂಡಿದ್ದ. ಮೊದಲ ಪತಿಯಿಂದ ಶಾಹಿಸ್ತಾಬಾನುಗೆ ಇಬ್ಬರು ಗಂಡು ಮಕ್ಕಳಿವೆ. ಇತ್ತ ಮಲೀಕ್ ಕೆಲಸಗಳ್ಳನಾದ ಕಾರಣ ಯಾರೂ ಹೆಣ್ಣು ಕೊಟ್ಟಿರಲಿಲ್ಲ. ಹೀಗಾಗಿ ಮಲೀಕ್ ಕುಟುಂಬಸ್ಥರು ವಿಧವೆಯಾದ ಶಾಹಿಸ್ತಾಬಾನು ಜೊತೆ ಮದುವೆ ಮಾಡಿಸಿದ್ದರು. ಮದುವೆಯಾಗಿ ಒಂದು ವರ್ಷವಾದರೂ ಗಂಡ ದುಡಿಯಲು ಹೋಗುತ್ತಿಲ್ಲ ಎಂದು ಶಾಹಿಸ್ತಾಬಾನು ಬೇಸತ್ತಿದ್ದಳು. ಪತ್ನಿಯನ್ನೂ ಕೆಲಸಕ್ಕೆ ಕಳಿಸದೆ ಮಲೀಕ್ ಮನೆಯಲ್ಲೇ ಇರಿಸಿಕೊಂಡಿದ್ದ. ಹೀಗಾದರೆ ಮನೆ ನಡೆಯುವುದು ಹೇಗೆ ಅಂತಾ ಶಾಹಿಸ್ತಾಬಾನು ಚಿಂತೆಗೀಡಾಗಿದ್ದಳು. ನೀನಾದರು ಕೆಲಸ ಮಾಡು ಎಂದು ಪ್ರತಿನಿತ್ಯ ಮಲೀಕ್‌ನನ್ನು ಒತ್ತಾಯ ಮಾಡುತ್ತಿದ್ದಳು. ಇದು ಮಲೀಕ್‌ಗೆ ಕಿರಿಕಿರಿ ಅನಿಸಿ ಪತ್ನಿಯ ಜೊತೆ ವಾಗ್ವಾದ ಶುರು ಮಾಡಿದ್ದನಂತೆ. ಇಂದು ಏಕಾಏಕಿ ಮನೆಯ ಮೇಲಿನ ಕೊಠಡಿಯಲ್ಲಿ ಜಗಳ ತೆಗೆದು ಪತ್ನಿಯ ಎದೆ ಮತ್ತು

ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಾಹಿಸ್ತಾಬಾನು ಕೊನೆಯುಸಿರೆಳೆದಿದ್ದಾಳೆ. ಗಾಬರಿಯಾದ ಮಲೀಕ್ ಪತ್ನಿಯ ಶವದ ಪಕ್ಕವೇ ಸ್ಟೂಲ್ ಇಟ್ಟು ಫ್ಯಾನ್‌ಗೆ ಪತ್ನಿಯ ಸೀರೆಯಿಂದಲೇ ಕಟ್ಟಿ ನೇಣು ಹಾಕಿಕೊಂಡಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಕಸಬಾಪೇಟೆ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸ್ಥಳೀಯರ ವಿಚಾರಣೆ ನಡೆಸಿದ್ದು ಕೊಲೆ ಮತ್ತು ಆತ್ಮಹತ್ಯೆಯ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಸಿಟ್ಟಿಗೆ ಬುದ್ದಿ ಕೊಟ್ಟು ದುಡಿಯದ ಗಂಡನೊಬ್ಬ ಪತ್ನಿಯ ಪ್ರಾಣಕ್ಕೆ ಕಂಟಕನಾಗಿದ್ದಾನೆ. ಇನ್ನೊಂದೆಡೆ ತಾಯಿಯನ್ನು ಕಳೆದುಕೊಂಡ ಎರಡು ಪುಟ್ಟ ಮಕ್ಕಳು ಅನಾಥವಾಗಿವೆ. ಘಟನೆ ಕುಟುಂಬಸ್ಥರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

