ಧಾರವಾಡ : ಸಮಗ್ರವಾದ ಶೈಕ್ಷಣಿಕ ಬದಲಾವಣೆ ಮತ್ತು ಪ್ರತಿ ಶಾಲೆ ಪ್ರಸಕ್ತ ವರ್ಷ ಸಂಪೂರ್ಣ ಫಲಿತಾಂಶ ಪಡೆಯುವಲ್ಲಿ ಶಾಲೆಯ ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕರ ಪಾತ್ರ ಮುಖ್ಯವಾಗಿದೆ. ಇದನ್ನು ಸಂಯೋಜಿಸಿ, ಗುರಿ ಸಾಧಿಸುವಲ್ಲಿ ಶಾಲೆಯ ಹೆಡ್ ಮಾಸ್ಟರ್ ಜವಾಬ್ದಾರಿ ಮಹತ್ವದ್ದಾಗಿದ್ದು, ಶಾಲೆಯನ್ನು ಪಕ್ಕಾ ಲೀಡ್ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಪ್ರೌಢಶಾಲಾ ಶಿಕ್ಷಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳ ಸಭೆ ಉದ್ದೇಶಿಸಿ, ಮಾತನಾಡಿದರು.
ಶೈಕ್ಷಣಿಕ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಇದರಲ್ಲಿ ಪಾಲಕರ ಸಹಕಾರವೂ ಅಗತ್ಯವಿದೆ. ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರನ್ನು ಸರಿಯಾಗಿ ಸಂಯೋಜಿಸಿ, ಅವರನ್ನು ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಬೇಕು. ಇದನ್ನು ಆಯಾ ಪ್ರೌಢಶಾಲಾ ಹೆಡ್ ಮಾಸ್ಟರ್ ಅವರ, ಮುಖ್ಯ ಶಿಕ್ಷಕರ ಜವಾಬ್ದಾರಿ ಬಹಳಷ್ಟಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಯಾವುದೇ ವಿದ್ಯಾರ್ಥಿಗೆ ವಿಶೇಷ ಕಾಳಜಿ ಅಗತ್ಯವಿದೆ ಎನಿಸಿದಲ್ಲಿ, ಶಾಲೆಯ ಮುಖ್ಯ ಶಿಕ್ಷಕರು ತಮಗೆ ಆ ಕುರಿತು ಶಿಪಾರಸ್ಸು ಮಾಡಿದರೆ ಅಗತ್ಯವಿರುವ ಶಿಷ್ಯವೇತನ, ಹಾಸ್ಟೆಲ್, ಪಠ್ಯಪುಸ್ತಕ ಮುಂತಾದವುಗಳನ್ನು ದೊರಕಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮುಖ್ಯ ಶಿಕ್ಷಕರು ಶಾಲೆಗೆ ಪ್ರತಿ ದಿನ ಸರಿಯಾದ ಸಮಯಕ್ಕೆ ಬರಬೇಕು, ಕ್ಲಾಸ್‍ಗಳಿಗೆ ಭೇಟಿ ಮಾಡಿ, ಶಿಕ್ಷಕರ ಪಾಠ ಮತ್ತು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಅವಲೋಕಿಸಬೇಕು. ನಿಯಮಿತವಾಗಿ ಪ್ರತಿ ಶಾಲೆಯಲ್ಲಿ ಎಸ್.ಡಿ.ಎಂ.ಸಿ ಸಭೆ, ಪಾಲಕರ ಸಭೆ ಮತ್ತು ತಾಯಂದಿರ ಸಭೆ ಜರುಗಿಸಿ, ಅಲ್ಲಿ ಚರ್ಚಿತ ವಿಷಯಗಳನ್ನು ದಾಖಲಿಸಬೇಕು. ಇದನ್ನು ಪ್ರತ್ಯೇಕ ತಂಡದಿಂದ ಜಿಲ್ಲಾಡಳಿತವು ನಿಗಾವಹಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಶಿಕ್ಷಕರಿಗೆ ಯಾವುದೇ ಒತ್ತಡವಿಲ್ಲ. ಕಲಿಕೆ ಮತ್ತು ಕಲಿಸುವ ಪ್ರಕ್ರಿಯೆಯಲ್ಲಿ ಪ್ರೀತಿಪೂರ್ವಕವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಎಲ್ಲದಕ್ಕೂ ಹೆಚ್ಚಿನದು, ಶಿಕ್ಷಕ ವೃತ್ತಿ ಪವಿತ್ರವಾದ್ದು. ಇದು ವೃತ್ತಿ ಅಲ್ಲ, ತಪಸ್ಸು. ಸಾಧನೆಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಜಿಲ್ಲಾಡಳಿತ ನಿಮ್ಮೊಂದಿಗೆ ಇರುತ್ತದೆ. ಪ್ರತಿ ಮಗು ತಪ್ಪದೇ ಶಾಲೆಗೆ ಬರಬೇಕು ಮತ್ತು ಶೈಕ್ಷಣಿಕ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ವಿವಿಧ ಶಿಕ್ಷಣ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ಶಿಕ್ಷಕರ ಕಾರ್ಯಬಾರ ಕಡಿಮೆಗೊಳಿಸುವ, ಸಿಲೇಬಸ್ ವಿಂಗಡನೆ ಮಾಡುವ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಗೆ ವಿಶೇಷ ತಂತ್ರಗಳನ್ನು ಅಳವಡಿಸುವ ಬಗ್ಗೆ ತಮ್ಮ ಸಲಹೆ, ಅನುಭವಗಳನ್ನು ವ್ಯಕ್ತಪಡಿಸಿದರು. ಮಿಷನ್ ವಿದ್ಯಾಕಾಶಿ ಯಶಸ್ವಿಗೆ ಎಲ್ಲರೂ ಆತ್ಮಸಾಕ್ಷಿಯಿಂದ ಮತ್ತು ಪ್ರಾಮಾಣಿಕವಾಗಿ, ಶಿಕ್ಷಕ ಸಮೂಹ ಒಟ್ಟಾಗಿ, ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಜಿಲ್ಲಾಡಳಿತಕ್ಕೆ ಭರವಸೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಷನ್ ವಿದ್ಯಾ ಕಾಶಿ ಕಚೇರಿ ಸಂಯೋಜಕಿ ಗಿರಿಜಾ ಅಮಲಜೇರಿ ವಂದಿಸಿದರು.
ಸಭೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ, ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಎಸ್.ಬಿ.ಮಲ್ನಾಡ, ಉಮಾದೇವಿ ಬಸಾಪುರ, ಮಹಾದೇವಿ ಮಾಡಲಗೇರಿ, ಡಿಡಿಪಿಐ ಕಚೇರಿಯ ಎಲ್ಲ ವಿಷಯಗಳ ಪರಿವಿಕ್ಷಕರು ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್, ಸರಕಾರಿ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಅಸ್ಫಾಕ ಹಿರೇಕುಂಬಿ, ಸಹ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಜಿ.ಬಶೆಟ್ಟಿ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷ ಹುದ್ದಾರ ಸೇರಿದಂತೆ ವಿವಿಧ ಪ್ರಮುಖರು ಮತ್ತು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಸರಕಾರಿ ಸಹ ಶಿಕ್ಷಕರ ಸಂಘ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ, ರೂಪ್ಸಾ ಮತ್ತು ಕುಸಮ ಸಂಘಟನೆಗಳ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ತಮ್ಮ ಸಲಹೆ, ಅಭಿಪ್ರಾಯಗಳನ್ನು ಮಂಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

