ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿರುವ ಕಾರಣ ಮಂಗಳವಾರದಿಂದ ಕ್ರಸ್ಟ್‌ಗೇಟ್‌ಗಳನ್ನು ಸಂಪೂರ್ಣ ಬಂದ್ ಮಾಡಿ ನೀರು ಸಂಗ್ರಹಿಸಿ ಇಟ್ಟುಕೊಳ್ಳುವ ಕಾರ್ಯ ಆರಂಭವಾಗಿದೆ.
ಒಳಹರಿವಿನ ಪ್ರಮಾಣ 10,683 ಕ್ಯುಸೆಕ್‌ನಷ್ಟಿದ್ದು, ಕಾಲುವೆಗಳಿಗೆ ಹರಿಯುವ ನೀರಿನ ಪ್ರಮಾಣ 10,696 ಕ್ಯೂಸೆಕ್‌ನಷ್ಟಿದೆ. ಹೀಗಾಗಿ ನದಿಗೆ ನೀರು ಹರಿಸುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ ಎಂದು ತುಂಗಭದ್ರಾ ಮಂಡಳಿ ತಿಳಿಸಿದೆ.
ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ ಇದ್ದು, ಸದ್ಯ 1,632 ಅಡಿ ಮಟ್ಟದಲ್ಲಿ ನೀರು ನಿಲ್ಲಿಸಲಾಗಿದೆ. 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 101.77 ಟಿಎಂಸಿ ಅಡಿ ನೀರು ಇದೆ. ಕಾಲುವೆಗೆ ಹರಿಯುತ್ತಿರುವ ನೀರಿನಷ್ಟೇ ಪ್ರಮಾಣದಲ್ಲಿ ಜಲಾಶಯದ ಒಳಹರಿವು ಸಹ ಇರುವ ಕಾರಣ ಇನ್ನೂ ಕೆಲವು ದಿನ ಇದೇ ಮಟ್ಟದಲ್ಲಿ ಅಣೆಕಟ್ಟೆಯಲ್ಲಿ ನೀರು ಇರುವ ನಿರೀಕ್ಷೆ ಇದೆ.
ಈಗಿನ ಸ್ಥಿತಿಯಲ್ಲಿ ಮೊದಲ ಬೆಳೆಗಂತೂ ನೀರು ಸಿಕ್ಕಿದೆ, ಎರಡನೇ ಬೆಳೆಗೂ ನೀರು ಸಿಗುವ ಸಾಧ್ಯತೆ ಇದೀಗ ಕಾಣಿಸುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ. ಹಿಂಗಾರು ಮಳೆ ಸಹ ಉತ್ತಮವಾಗಿ ಆದರೆ ಎರಡನೇ ಬೆಳೆಗೆ ಸಾಕಷ್ಟು ನೀರು ಸಿಗಲಿದೆ ಎಂಬ ವಿಶ್ವಾಸದಲ್ಲಿ ರೈತರಿದ್ದಾರೆ.
ಒಳಹರಿವು ಕಡಿಮೆಯಾದಂತೆ ಹಂತ ಹಂತವಾಗಿ ಗೇಟ್‌ಗಳನ್ನು ಮುಚ್ಚುತ್ತ ಕೊನೆಯ ಕೆಲವು ದಿನ ಮೂರು ಗೇಟ್‌ಗಳಿಂದ ಮಾತ್ರ ನೀರನ್ನು ಹರಿಸಲಾಗುತ್ತಿತ್ತು. ಇದೀಗ ಎಲ್ಲಾ ಗೇಟ್‌ಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ಟಿಬಿ ಮಂಡಳಿ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

