ಅಣ್ಣಿಗೇರಿ : ಸತತವಾಗಿ ಸುರಿದ ಮಳೆಯಿಂದ ಅಣ್ಣಿಗೇರಿ-ಹಳ್ಳಿಕೇರಿ-ಅನ್ನೂರ-ಕಿತ್ತೂರ ರಸ್ತೆ ಬಸ್ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣ ಖಡಿ ಮೊರಂ ಹಾಕಿ ಗಟ್ಟಿಗೊಳಿಸಿ ಬಸ್ ಓಡಾಡಲು ಸಾರ್ವಜನಿಕರಿಗೆ ಅನುಕೂಲ ಮಾಡಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಹಳ್ಳಿಕೇರಿ-ಅಡ್ಡಿರ-ಕಿತ್ತೂರ-ನಾವಳ್ಳಿಯಿಂದ ತುಪ್ಪದಕುರಹಟ್ಟಿ ಕ್ರಾಸ್ ವರೆಗೆ ರಸ್ತೆ ದುರಸ್ತಿ ಕಾಮಗಾರಿ ವೀಕ್ಷಣೆ ಮಾಡಿದ ಅವರು ಕಳೆದ ಕೆಲ ದಿನಗಳಿಂದ ಇಲ್ಲಿಯವರೆಗೆ ಸತತವಾಗಿ ಸುರಿದ ಮಳೆಗೆ ಕಪ್ಪು ಮಣ್ಣಿನಿಂದ ಕೂಡಿದ ಎಲ್ಲ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಲು ಖಡಿ, ಮೊರಂ ಹಾಗೂ ವೆಟಮಿಕ್ಸ್ ಹಾಕಿ ಗ್ರೇಡರ್ ಮಷಿನ್ ಮೂಲಕ ಲೆವಲ ಮಾಡಿ, ವೈಬ್ರೆಟರ್ ರೂಲರ್ ಮೂಲಕ ಗಟ್ಟಿಗೊಳಿಸಿ ಬಸ್ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ ರಸ್ತೆಗಳು ಹಾಳಾಗಿದ್ದು ಸಂಪೂರ್ಣ ಅಭಿವೃದ್ಧಿಪಡಿಸಲು ಅಂದಾಜು 200 ಕೋಟಿ ಅನುದಾನ ಬಿಡುಗಡೆ ಮಾಡಲು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದು ಈಗಾಗಲೇ ಅಲ್ಲಲ್ಲಿ ದುರಸ್ಥಿಗಾಗಿ ರೂ. 15.00 ಕೋಟಿ ಅನುದಾನವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

