Breaking News

ರಾಜ್ಯದ ಬೇಡಿಕೆಗಳ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ

ನವದೆಹಲಿ: ರಾಜ್ಯದ ಕೈಗಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರ ಸರಕಾರದ ಸಹಕಾರ ಕೋರಿ ಮತ್ತು ಅಗತ್ಯ ಬಂಡವಾಳ ಹೂಡಿಕೆ ನಿರೀಕ್ಷಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಂಗಳವಾರ ಇಲ್ಲಿ ಭೇಟಿ ಮಾಡಿ, ವಿಸ್ತೃತ ಮಾತುಕತೆ ನಡೆಸಿದರು.
2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪಾಟೀಲ ಅವರು ದೆಹಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲ ದಿನ ಎಡೆಬಿಡದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
ಮೊದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್ ಕಾರಿಡಾರ್ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್‌ಇಎಲ್ ಮತ್ತು ಬಿಇಎಂಎಲ್ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.
ಬಳಿಕ ರಾಜ್ಯದವರೇ ಆದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಂಡ ಪಾಟೀಲ ಅವರು, ಮೇಲಿನ ಸಂಗತಿಗಳ ಜತೆಗೆ ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಚಿವರು, ಬೇಗನೆ ಹಾಳಾಗುವಂತಹ ಪದಾರ್ಥಗಳನ್ನು ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್ ಟಿ ತೆರಿಗೆಯನ್ನು ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರೀ ಆಮದು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *