ಬೆಂಗಳೂರು: ಮೀಸಲಾತಿ ರದ್ದುಪಡಿಸುವುದಾಗಿ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಇದನ್ನು ಖಂಡಿಸಿ ಇವತ್ತಿನಿಂದ ಎರಡು ದಿನಗಳ ಕಾಲ ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿಗಳಿಗೆ ಗೌರವ ಕೊಡಬೇಕು, ಅವರಿಗೆ ರಕ್ಷಣೆ ಕೊಡಬೇಕೆಂಬ ದೃಷ್ಟಿಯಿಂದ ನಾವು ರಾಜ್ಯಾದ್ಯಂತ ನಾಳೆ, ನಾಡಿದ್ದು ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡುತ್ತೇವೆ ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ಮೀಸಲಾತಿ ನಿಲ್ಲಿಸುವುದಾಗಿ ಹೇಳಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಸಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್, ಸಂವಿಧಾನವನ್ನು ಬರೆದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವತ್ತು ಅಪಮಾನ ಮಾಡಲಾಗಿತ್ತು. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿ ಅವರ ವಿಚಾರಕ್ಕೇ ತಿಲಾಂಜಲಿ ನೀಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ದಲಿತರ ಬದುಕಿಗೆ, ಎಸ್‍ಸಿ, ಎಸ್‍ಟಿಗಳ ಮೀಸಲಾತಿಗೆ ಕೊಡಲಿಪೆಟ್ಟು ಹಾಕುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಇದೇನಾ ನೀವು ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ನೀಡುವ ಗೌರವ ಎಂದು ಪ್ರಶ್ನಿಸಿದರು. ಇದೇನಾ ನೀವು ಸಂವಿಧಾನಕ್ಕೆ ಕೊಡುವ ಮರ್ಯಾದೆ ಎಂದು ಕೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

