ನವದೆಹಲಿ: ವಸತಿರಹಿತರೆಲ್ಲರಿಗೂ ವಸತಿ ಕಲ್ಪಿಸುವ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಡಿ ಅನುಷ್ಠಾನಗೊಳಿಸಲಾದ ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ (ಪಿಎಂಎವೈ-ಜಿ)ದ ಫಲಾನುಭವಿಗಳಾಗಲು ಈ ಹಿಂದೆ ಕೇಂದ್ರ ಸರಕಾರ ಅನುಸರಿಸುತ್ತಿದ್ದ ಸ್ವಯಂಚಾಲಿತ ಹೊರಗುಳಿಯುವಿಕೆ ಮಾನದಂಡದಲ್ಲಿ ಕೆಲವು ಪ್ರಮುಖ ಸಡಿಲಿಕೆಗಳನ್ನು ಮಾಡಿದೆ.
ಇದರಿಂದ ಗ್ರಾಮೀಣ ಪ್ರದೇಶದ ಮತ್ತಷ್ಟು ಬಡ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದು, ಸ್ವಂತ ಸೂರು ಹೊಂದುವ ಇವರ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.
ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಿಎಂಎವೈ-ಜಿ ಮಾನದಂಡಗಳಲ್ಲಿ ಸಡಿಲಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. 2024-25ರಿಂದ 2028-29ರ ಅವಧಿಗೆ ಅನ್ವಯವಾಗುವಂತೆ ಪಿಎಂಎವೈ-ಜಿ ಯೋಜನೆಯನ್ನು ಜಾರಿಗೊಳಿಸುವ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ತನ್ನ ಒಪ್ಪಿಗೆಯನ್ನು ನೀಡಿತ್ತು. ಕೇಂದ್ರ ಹಣಕಾಸು ಸಚಿವರು ಪ್ರಸಕ್ತ ಸಾಲಿನ ಬಜೆಟ್ ಭಾಷಣದ ವೇಳೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು.
ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಪೂರಕವಾಗಿ ಕೇಂದ್ರ ಸರಕಾರ ಪಿಎಂಎವೈ-ಜಿ ಯನ್ನು ಅನುಷ್ಠಾನಗೊಳಿಸಿತ್ತು. ಇದಕ್ಕಾಗಿ ಪ್ರತ್ಯೇಕ ಮಾನದಂಡವನ್ನು ರೂಪಿಸಿತ್ತು, ಈಗ ಮಾನದಂಡದಲ್ಲಿ ಕೆಲವು ಸಡಿಲಿಕೆಗಳನ್ನು ಮಾಡುವ ಮೂಲಕ ಇನ್ನಷ್ಟು ಹೆಚ್ಚಿನ ಸಂಖ್ಯೆಯ ವಸತಿರಹಿತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಸರಕಾರ ಮುಂದಾಗಿದೆ.
ದ್ವಿಚಕ್ರ ವಾಹನ, ರೆಫ್ರಿಜರೇಟರ್, ಮೋಟಾರು ಚಾಲಿತ ಮೀನುಗಾರಿಕ ದೋಣಿ ಇವೆಲ್ಲವೂ ಸರ್ವೇಸಾಮಾನ್ಯವಾಗಿದ್ದು, ಇವನ್ನು ಹೊಂದಿದ್ದ ಮಾತ್ರಕ್ಕೆ ಈ ಕುಟುಂಬಗಳು ಮಧ್ಯಮ ಅಥವಾ ಶ್ರೀಮಂತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇವೆಲ್ಲವನ್ನು ಹೊಂದಿದಾಕ್ಷಣ ಆ ಕುಟುಂಬ ಬಡತನ ರೇಖೆಗಿಂತ ಮೇಲಿದೆ ಎಂಬ ನಿರ್ಧಾರಕ್ಕೆ ಬರುವುದು ಒಂದಿಷ್ಟು ಆತುರದ ನಿರ್ಧಾರವಾದೀತು, ಈ ಹಿನ್ನೆಲೆಯಲ್ಲಿ ಪಿಎಂಎವೈ-ಜಿ ಮಾನದಂಡದಲ್ಲಿ ಸಡಿಲಿಕೆ ಮಾಡುವಂತೆ ಬಡವರು ಮತ್ತು ಜನಸಾಮಾನ್ಯರು ಮುಂದಿರಿಸಿದ್ದ ಬೇಡಿಕೆಗೆ ಈಗ ಸರಕಾರ ಸ್ಪಂದಿಸಿರುವುದರಿಂದ ದೇಶದ ಗ್ರಾಮೀಣ ಪ್ರದೇಶದ ಲಕ್ಷಾಂತರ ಮಂದಿ ಈ ಯೋಜನೆಯ ಫಲಾನುಭವಿಗಳಾಗಿ, ತಮ್ಮದೇ ಆದ ಮನೆಯನ್ನು ಹೊಂದಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ.
bigtvnews | Hubli Dharwad News | Kannada News | Karnataka News Hubli News | News In Hubli | Local news

