Breaking News

ಮಹಿಳಾ ಹಾಗೂ ಮಕ್ಕಳ ದೌರ್ಜನ್ಯ ತಡೆಗೆ ವ್ಯಾಪಕ ಜಾಗೃತಿ ಹಮ್ಮಿಕೊಳ್ಳಿ:ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ, ಬಾಲ್ಯವಿವಾಹ, ಲೈಂಗಿಕ ಶೋಷಣೆ ಹಾಗೂ ಸಾಗಾಟ ತಡೆಗಟ್ಟುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಜಾಗೃತಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ನೂತನ ಸಭಾಂಗಣದಲ್ಲಿ ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡುತ್ತಾ, ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೆಣ್ಣುಮಕ್ಕಳಿಗೆ ಮನದಟ್ಟಾಗುವ ನಿಟ್ಟಿನಲ್ಲಿ ಪ್ರೌಢಾವಸ್ಥೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ, ಮುಟ್ಟು ಹಾಗೂ ಲೈಂಗಿಕ ಶಿಕ್ಷಣ, ಗುಡ್ ಟಚ್, ಬ್ಯಾಡ ಟಚ್ ಹಾಗೂ ಪೋಕ್ಸೊ ಕಾಯ್ದೆ ಕುರಿತಂತೆ ಶಾಲೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ಕಾರ್ಯ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಾಗೂ ಗ್ರಾಮ ಸಭೆಗಳನ್ನು ಹಮ್ಮಿಕೊಳ್ಳುವಂತೆ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರೌಢಾವಸ್ಥೆಯಲ್ಲಿ ಮಕ್ಕಳಲ್ಲಿ ಹಲವಾರು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಆಗುತ್ತವೆ. ಹಾರ್ಮೊನ್ ಬದಲಾವಣೆಗಳು ನೈಸರ್ಗಿಕ ಕ್ರಿಯೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಸರಿಯಾದ ಸೂಕ್ತ ವೈಜ್ಞಾನಿಕ ಶಿಕ್ಷಣವನ್ನು ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳು ನೀಡಬೇಕು. ಕಲಘಟಗಿಯ ಲಂಬಾಣಿ ತಾಂಡಾಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳು ಹೆಚ್ಚಾಗಿ ಕಂಡು ಬರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮೀಕ್ಷೆ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರಿಗೆ ತಿಳಿಸಿದರು. ಯಾವುದೇ ಅಹಿತಕರ ಘಟನೆ, ದೌರ್ಜನ್ಯ ನಡೆಯುವ ಮುಂಚೆ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದರು.

ಬಾಲ್ಯವಿವಾಹಗಳನ್ನು ಸಮರ್ಪಕವಾಗಿ ತಡೆಗಟ್ಟುವಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಗಳಲ್ಲಿ, ಗ್ರಾಮ ಸಭೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ರೂಪಿಸುವಂತೆ ಹಾಗೂ ಜಾಗೃತಿ ಮೂಡಿಸುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. 2023-24 ನೇ ಸಾಲಿನಲ್ಲಿ 15 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 14 ಪ್ರಕರಣಗಳನ್ನು ತಡೆಗಟ್ಟಲಾಗಿದೆ. ಒಂದು ಪ್ರಕರಣದಲ್ಲಿ ಎಫ್.ಐ.ಆರ್ ದಾಖಲಾಗಿದೆಯೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಆದರೆ ತಡೆಗಟ್ಟಲಾದ 14 ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದಿದ್ದಕ್ಕಾಗಿ ಜಿಲ್ಲಾಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದರಲ್ಲದೇ ಸಂಪೂರ್ಣ ಮಾಹಿತಿ ಒದಗಿಸಿದ ನಂತರ ಸಭೆ ಜರುಗಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಬಾಲ್ಯವಿವಾಹ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕೌಟುಂಬಿಕ ದೌರ್ಜನ್ಯದಡಿ ಒಟ್ಟು 335 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಸಾಂತ್ವನ ಕೇಂದ್ರ ಸ್ವಾಧಾರ ಕೇಂದ್ರಗಳಲ್ಲಿ ಕೌನ್ಸಿಲಿಂಗ್ ಮೂಲಕ ಬಗೆಹರಿಸಲಾಗುತ್ತದೆ. ಕೌಟುಂಬಿಕ ಹಿಂಸೆಗೆ ಕಾರಣಗಳನ್ನು ಕೇಳಿದ ಜಿಲ್ಲಾಧಿಕಾರಿಗಳು ಗಂಡ ಹೆಂಡರ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು, ಇಗೋ ಸಮಸ್ಯೆ, ಅನೈತಿಕ ಸಂಬಂಧ ಮುಂತಾದವುಗಳು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾತನಾಡಿ ಕುಟುಂಬದಲ್ಲಿ ಸಂಸ್ಕಾರ ತಾಳ್ಮೆ ಹಾಗೂ ಒಬ್ಬರಿಗೊಬ್ಬರು ಗೌರವಯುತವಾಗಿ ನಡೆದುಕೊಳ್ಳುವ ಬಗ್ಗೆ ಜನಸಾಮಾನ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆಯೆಂದರು.

ನ್ಯಾಶನಲ್ ನ್ಯೂಟ್ರಿಶನ್ ಮಿಷನ್, ಪೋಷಣ್ ಅಭಿಯಾನ ಯೋಜನೆ ಅಡಿ ಗರ್ಭಿಣಿಯರಿಗೆ ಬಾಣಂತಿಯರಿಗೆ ಉತ್ತಮ ಪೌಷ್ಠಿಕ ಆಹಾರ ಪದ್ಧತಿಗಳನ್ನು ಬಳಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು. ನುಗ್ಗೆಸೊಪ್ಪು, ತರಕಾರಿ, ಸಿರಿಧಾನ್ಯ ಬಳಸುವ ಬಗ್ಗೆ ರಕ್ತ ಹೀನತೆಗೆ ಬಗ್ಗೆ ಜಾಗೃತಿ ಹಮ್ಮಿಕೊಳ್ಳುವಂತೆ ಹಾಗೂ ಅಪೌಷ್ಟಿಕ ಮಕ್ಕಳಿಗೆ ವಿಶೇಷ ಆಹಾರ ಬಗ್ಗೆ ಗಮನ ನೀಡುವಂತೆ ಅವರು ತಿಳಿಸಿದರು.

ಮಿಶನ್ ಶಕ್ತಿ ಯೋಜನೆ, ಸಖಿ ಒನ್ ಸ್ಟಾಪ್ ಸೆಂಟರ್, ಶಕ್ತಿ ಸದನ, ಸಖಿ ನಿವಾಸ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕುಂದಗೋಳ ಹಾಗೂ ಕಲಘಟಗಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುವ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿ.ಭರಮಣಿ ಅವರು ಅಶಿಕ್ಷಿತ ಹಾಗೂ ಬಡ ಗ್ರಾಮೀಣ ಹೆಣ್ಣುಮಕ್ಕಳು ಇದಕ್ಕೆ ಬಲಿಪಶು ಆಗುತ್ತಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ, ಜಿಲ್ಲಾ ಪಂಚಾಯತ ಯೋಜನಾಧಿಕಾರಿ ದೀಪಕ ಮಡಿವಾಳರ, ಡಿಎಚ್‍ಓ ಡಾ. ಶಶಿ ಪಾಟೀಲ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *