ಕೊಪ್ಪಳ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಮುಂಗಾರು ಬೆಳೆ ಬೆಳೆದಿರುವ ರೈತರಿಗೆ ಸಿಎಂ ಸಿದ್ದರಾಮಯ್ಯ ಅವರು ಹಿಂಗಾರು ಬೆಳೆಯ ಸಿಹಿಸುದ್ದಿ ನೀಡಿದ್ದಾರೆ. ಇಂದು ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲು ಮುನಿರಾಬಾದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ ಎಂದು ಘೋಷಿಸಿದರು. ಈ ಮೂಲಕ ಈ ಭಾಗದ ರೈತರಿಗೆ ಎರಡನೇ ಬೆಳೆಗೆ ನೀರು ಕೊಡುವುದಾಗಿ ಸ್ಪಷ್ಟಪಡಿಸಿದರು.
ಕೊಪ್ಪಳ ತಾಲೂಕಿನ ಗಿಣಗೇರಾ ಏರಸ್ಟ್ರಿಪ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ತುಂಗಭದ್ರಾ ಜಲಾಶಯ ಮತ್ತೆ ತುಂಬಿದೆ. ಮುಂಗಾರು ಮತ್ತು ಹಿಂಗಾರು ಎರಡು ಬೆಳೆಗೆ ನೀರು ಸಿಗುತ್ತದೆ. ಗೇಟ್ ದುರಸ್ತಿ ಕೆಲಸವನ್ನು ಬಹಳ ಜಾಗೃತಿಯಿಂದ ಮಾಡಲಾಗಿತ್ತು, ಎಲ್ಲರ ಶ್ರಮದಿಂದ 20 ಕ್ಕೂ ಹೆಚ್ಚು ಟಿಎಂಸಿ ನೀರು ಉಳದಿದೆ. ಮಳೆರಾಯನಿಗೆ ಸರ್ಕಾರದ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ, ಎರಡನೇ ಬೆಳೆಗೆ ನೀರು ಕೊಡಲಿಕ್ಕೆ ಸಾಧ್ಯವಾಗಬಹುದು. ತುಂಗಭದ್ರಾ ಜಲಾಶಯ 70 ವರ್ಷದ ಡ್ಯಾಂ ಇದೆ. ಐವತ್ತು ವರ್ಷಕ್ಕೆ ಗೇಟ್ ಬದಲಾವಣೆ ಮಾಡಬೇಕು ಅನ್ನೋ ನಿಯಮವಿದೆ. ತಜ್ಞರ ಕಮಿಟಿ ಮಾಡಲಾಗಿದೆ, ಅವರು ವರದಿ ನೀಡಿದ್ದಾರೆ. ಅವರ ವರದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

