ಬೆಳಗಾವಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಸಿ.ಎಂ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ತಯಾರಿಸಿದ ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಜನರು ಮತ್ತು ದೇವಾಲಯಗಳಿಂದ ಭಾರಿ ಬೇಡಿಕೆ ಬಂದಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ (ಬೆಮುಲ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಎಂಎಫ್ ಅಧ್ಯಕ್ಷನಿದ್ದಾಗ, ತಿರುಮಲ ತಿರುಪತಿ ದೇವಸ್ಥಾನಕ್ಕೆ ಲಡ್ಡು ತಯಾರಿಕೆಗೆ ತುಪ್ಪ ಕಳುಹಿಸುತ್ತಿದ್ದೆವು. ನಾವೇ ತಯಾರಿಸಿದ ತುಪ್ಪವನ್ನು ಪ್ರಸಾದಕ್ಕೆ ಬಳಸಲಾಗುತ್ತಿದೆ ಎಂಬ ಹೆಮ್ಮೆ ನಮಗೂ ಇತ್ತು. ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದವರು ಟೆಂಡರ್ ವ್ಯವಸ್ಥೆ ಪರಿಚಯಿಸಿದರು. ಆಗ ಕಡಿಮೆ ಮೊತ್ತಕ್ಕೆ ತುಪ್ಪ ಪೂರೈಸುವ ಗುತ್ತಿಗೆಯನ್ನು ಖಾಸಗಿ ಏಜೆನ್ಸಿ ಪಡೆಯಿತು. ಆಗ ರಾಜಕೀಯ ಮುಖಂಡರೊಬ್ಬರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದರು. ಗುಣಮಟ್ಟದ ಕಾರಣಕ್ಕಾಗಿ ಕಡಿಮೆ ದರಕ್ಕೆ ತುಪ್ಪ ಪೂರೈಕೆಗೆ ನಾವು ನಿರಾಕರಿಸಿದೆವು ಎಂದರು.
ನಂದಿನಿ ತುಪ್ಪದಿಂದ ಲಡ್ಡು ತಯಾರಿಸಿದಾಗ, ಭಕ್ತರೂ ಸಂತಸ ವ್ಯಕ್ತಪಡಿಸಿದ್ದರು. ನಾಯ್ಡು ಮಾಡಿದ ಆರೋಪಗಳು ಈಗ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಅವರ ಹೇಳಿಕೆಯಿಂದ ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಬೇಡಿಕೆ ಹೆಚ್ಚಿದ್ದು, ನಾಲ್ಕು ವರ್ಷಗಳ ನಂತರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಮತ್ತೆ ಪೂರೈಕೆ ಆರಂಭವಾಗಿದೆ. ಎಲ್ಲ ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

