ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳ್ಳತನ ಪ್ರಕರಣಗಳಿಂದಾಗಿ ಜನರು ನಿದ್ರೆಗೆಡುವಂತಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ಬೈಕ್ ಕಳವು, ಮನೆಯ ಮುಂದೆ ನಿಲ್ಲಿಸಿದ ಸರಕು ವಾಹನ ಕಳವು, ಕೃಷಿ ಪಂಪ್‌ಸೆಟ್ ಕಳ್ಳತನ, ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಮತ್ತು ಪುರುಷರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು, ಜೇಬುಗಳವು, ಮನೆಯ ಬೀಗ ಮುರಿದು ಒಡವೆಗಳ ಕಳವು, ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಹೀಗೆ ವಿವಿಧ ರೀತಿಯ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ನಿತ್ಯ ಒಂದಲ್ಲಾ ಒಂದು ರೀತಿಯ ಕಳ್ಳತನ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ. ನಗರ ಮತ್ತು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, 2024ರ ಮಾರ್ಚ್‌ನಿಂದ ಆಗಸ್ಟ್ ತಿಂಗಳ ನಡುವೆ ಗ್ರಾಮೀಣ ಭಾಗದಲ್ಲಿ 30 ಹಾಗೂ ನಗರ ವ್ಯಾಪ್ತಿಯ 101 ಸೇರಿ ಒಟ್ಟು 131 ಬೈಕ್‌ಗಳು ಕಳವಾಗಿವೆ. ಇದರಲ್ಲಿ ರೈತರ, ಸರ್ಕಾರಿ ನೌಕರರ, ಖಾಸಗಿ ಕಂಪನಿಗಳ ಉದ್ಯೋಗಿಗಳ, ವ್ಯಾಪಾರಿಗಳ ಬೈಕ್‌ಗಳು ಸೇರಿವೆ. ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಸೇರಿದ ಬೈಕ್‌ಗಳೂ ಕಳ್ಳತನವಾಗಿವೆ.
ಕಳ್ಳತನಕ್ಕೆ ಸಂಬಂಧಿಸಿದಂತೆ 6 ತಿಂಗಳ ಅವಧಿಯಲ್ಲಿ 390 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 237 ಕಳ್ಳತನ ಪ್ರಕರಣಗಳು ಗ್ರಾಮೀಣ ಭಾಗಕ್ಕೆ ಸೇರಿದ್ದರೆ, 153 ಪ್ರಕರಣಗಳು ಕಮಿಷನರೇಟ್ ವ್ಯಾಪ್ತಿಗೆ ಸಂಬಂಧಿಸಿವೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ರಮವಾಗಿ 73, 82 ಮತ್ತು 75 ಪ್ರಕರಣಗಳು ದಾಖಲಾಗಿವೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ 55ರ ಆಸುಪಾಸಿನಲ್ಲಿ ಕೇಸ್‌ಗಳು ವರದಿಯಾಗಿವೆ.
ಕಳ್ಳತನ ಪ್ರಕರಣಗಳುಬೈಕ್ ಕಳ್ಳತನ ಪ್ರಕರಣಗಳು ಕಳ್ಳತನ ಪ್ರಕರಣಗಳ ತಡೆಗೆ ಈಗಾಗಲೇ ರಾತ್ರಿ ವೇಳೆಯ ಗಸ್ತು ಹೆಚ್ಚಳ ಮಾಡಿ ಜನರಲ್ಲಿ ಜಾಗೃತಿಯೂ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ. ಪ್ರತಿ ತಿಂಗಳು ಸಭೆ ನಡೆಸಿ ಕಳ್ಳತನ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

