ಜಮ್ಮುಮತ್ತು ಕಾಶ್ಮೀರ: 10 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 24 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ಇದೀಗ ಎರಡನೇ ಹಂತದ ಚುನಾವಣೆ ನಾಳೆ (ಬುಧವಾರ) ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ರಜೌರಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರು ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ.
ರಿಯಾಸಿ, ಶ್ರೀ ಮಾತಾ ವೈಷ್ಣೋ ದೇವಿ, ಕಲಕೋಟೆ ಸುಂದರ್‌ಬನಿ, ನೌಶೇರಾ, ರಾಜೌರಿ (ಎಸ್‌ಟಿ), ಬುಧಾಲ್ (ಎಸ್‌ಟಿ), ತನ್ನಮಂಡಿ (ಎಸ್‌ಟಿ), ಸುರನ್‌ಕೋಟೆ (ಎಸ್‌ಟಿ), ಪೂಂಚ್ ಹವೇಲಿ ಮತ್ತು ಮೆಂಧರ್ (ಎಸ್‌ಟಿ), ಕಂಗನ್ (ಎಸ್‌ಟಿ), ಗಂದರ್‌ಬಾಲ್, ಹಜರತ್‌ಬಾಲ್, ಖಾನ್ಯಾರ್, ಹಬ್ಬಕದಲ್, ಲಾಲ್ ಚೌಕ್, ಚನ್ನಪೋರಾ, ಝಡಿಬಲ್, ಈದ್ಗಾ, ಸೆಂಟ್ರಲ್ ಶಾಲ್ತೆಂಗ್, ಬುಡ್ಗಾಮ್, ಬೀರ್ವಾ, ಖಾನ್‌ಸಾಹಿಬ್, ಚ್ರಾರ್-ಐ-ಶರೀಫ್, ಚದೂರ ಮತ್ತು ಗುಲಾಬ್‌ಗಢ್ (ಎಸ್‌ಟಿ) ಚುನಾವಣೆ ನಡೆಯುವ ಕ್ಷೇತ್ರಗಳಾಗಿವೆ.
ಎರಡನೇ ಹಂತದ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಅವರ ಭವಿಷ್ಯ ನಿರ್ಧಾರವಾಗಲಿದೆ. ಬುದ್ಗಾಮ್ ಮತ್ತು ಗಂದರ್‌ಬಲ್ ಎರಡೂ ಕ್ಷೇತ್ರಗಳಿಂದ ಒಮರ್ ಅಬ್ದುಲ್ಲಾ ಸ್ಪರ್ಧೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

