ಬೆಂಗಳೂರು: ಕರ್ನಾಟಕ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಗಮನಹರಿಸಿದ್ದು, ವಿವಿಧ ಬೇಡಿಕೆಗಳನ್ನು ಶಿಕ್ಷಕರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕುರಿತು ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸಿ ಆದೇಶಿಸಿದೆ.
ಒಂದು ತಿಂಗಳಿನಲ್ಲಿ ವರದಿ ಸಲ್ಲಿಸಬೇಕು ಎಂದು ಸಮಿತಿಗೆ ಗಡುವು ನಿಗದಿ ಮಾಡಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಎ. ಮಹಾಲಕ್ಷ್ಮಿ ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, (ಪ್ರಾಥಮಿಕ) ಆದೇಶವನ್ನು ಹೊರಡಿಸಿದ್ದಾರೆ. ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇವರ ಪತ್ರವನ್ನು ಉಲ್ಲೇಖಿಸಿದ್ದಾರೆ.
ಆದೇಶ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸದಿರುವುದು, ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಪದವಿ ಪೂರೈಸಿದ ಶಿಕ್ಷಕರನ್ನು 6 ರಿಂದ 8ಕ್ಕೆ ಸೇವಾ ನಿರತ ಪದವೀಧರ ಶಿಕ್ಷಕರೆಂದು ಒಂದು ಬಾರಿ ಪದನಾಮೀಕರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇವರು ಪತ್ರದಲ್ಲಿ ಕೋರಿರುತ್ತಾರೆ.
ಮೇಲ್ಕಂಡ ಬೇಡಿಕೆಗಳ ಕುರಿತು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸದರಿ ಬೇಡಿಕೆಗಳನ್ನು ಪರಿಗಣಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಅವಕಾಶವಿರುವ ಕುರಿತು ಹಾಗೂ ಇದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಮಗ್ರವಾದ ವರದಿ ನೀಡಲು ಸಮಿತಿಯನ್ನು ರಚಿಸಲು ಸರ್ಕಾರವು ತೀರ್ಮಾನಿಸಿ, ಆದೇಶಿಸಿದೆ ಎಂದು ಹೇಳಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

