ಮಡಿಕೇರಿ: ಜಿಲ್ಲೆಯಲ್ಲಿನ ಪೌರಕಾರ್ಮಿಕರ ವಸತಿ ಗೃಹಗಳು ಶಿಥಿಲಗೊಂಡಿರುವ ಬಗ್ಗೆ ಪರಿಶೀಲಿಸಿ, ವಸತಿ ಗೃಹ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಂಬಂಧ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಇತರೆ ಕಡೆಗಳಲ್ಲಿ ಪೌರಕಾರ್ಮಿಕರ ವಸತಿ ಗೃಹ ಕಟ್ಟಡ ಶಿಥಿಲಗೊಂಡಿರುವ ಮಾಹಿತಿ ಪಡೆದು ವರದಿ ನೀಡಬೇಕು. ಜೊತೆಗೆ, ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಅಗತ್ಯ ಪ್ರಸ್ತಾವ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಈ ಕುರಿತು ವಿಷಯ ಪ್ರಸ್ತಾಪಿಸಿದ ಸಮಿತಿ ಸದಸ್ಯರಾದ ಪಳನಿ ಪ್ರಕಾಶ್ ಅವರು ಮಡಿಕೇರಿ ನಗರಸಭೆ, ವಿರಾಜಪೇಟೆ ಮತ್ತು ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸೇರಿದಂತೆ ಪೌರಕಾರ್ಮಿಕರು ವಾಸಿಸುವ ವಸತಿ ಗೃಹಗಳು ಹಳೇ ಕಟ್ಟಡಗಳಾಗಿದ್ದು, ಶಿಥಿಲಗೊಂಡಿವೆ. ಆದ್ದರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಪೌರಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳಿಗೆ ವಸತಿ ಒದಗಿಸುವಂತಾಗಬೇಕು ಎಂದು ಕೋರಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

