ಸೇಡಂ: ತಾಲ್ಲೂಕು ಸೇರಿದಂತೆ ವಿಧಾನಸಭಾ ಕ್ಷೇತ್ರದ 117 ಮಠ ಮಂದಿರಗಳ ನಿರ್ಮಾಣ ಮತ್ತು ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರ ₹10 ಕೋಟಿ ಮಂಜೂರು ಮಾಡಿದೆ. ತಾಲ್ಲೂಕಿನ 90, ಸೇಡಂ ವಿಧಾನಸಭಾ ಕ್ಷೇತ್ರದ ಚಿಂಚೋಳಿ ತಾಲ್ಲೂಕಿನ 27 ಮಠ ಮಂದಿರಗಳ ಜೀರ್ಣೋದ್ಧಾರಕ್ಕೆ ಮಂಜೂರಾತಿ ಸಿಕ್ಕಿದ್ದು ಕಾಮಗಾರಿ ಆರಂಭಿಸಬೇಕಿದೆ.
ಕ್ಷೇತ್ರದ ಶಾಸಕ, ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಪ್ರಯತ್ನದಿಂದಾಗಿ ಧಾರ್ಮಿಕ ಕ್ಷೇತ್ರಕ್ಕೆ ಅನುದಾನ ಬಂದಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾದಡಿ ಮಂಜೂರಾತಿ ದೊರೆತಿದೆ. ವಿವಿಧ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ, ಜೀರ್ಣೋದ್ಧಾರ ಕಾಮಗಾರಿಗಳಿಗೆ ಅನುದಾನ ಬಳಸುವಂತೆ ಷರತ್ತುಬದ್ಧ ನಿಯಮಾವಳಿಗಳನ್ನು ರೂಪಿಸಿ ಮುಜರಾಯಿ ಇಲಾಖೆಯ ಮೂಲಕ ಕೈಗೊಳ್ಳಲು ಆದೇಶಿಸಲಾಗಿದೆ.
ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಬಲಭೀಮಸೇನ ದೇವಸ್ಥಾನಕ್ಕೆ ₹2 ಕೋಟಿ, ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠಕ್ಕೆ ₹65 ಲಕ್ಷ, ತಾಲ್ಲೂಕಿನ ಊಡಗಿ ಗ್ರಾಮದ ಲೋಕೇಶ್ವರ ದೇವಸ್ಥಾನಕ್ಕೆ ₹50 ಲಕ್ಷ, ಸೇಡಂ ವಿಧಾನಸಭಾ ಕ್ಷೇತ್ರದ ಶಿರೋಳ್ಳಿ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನಕ್ಕೆ ₹25 ಲಕ್ಷ. ತಾಲ್ಲೂಕಿನ ಹಂದರಕಿ ಗ್ರಾಮದ ಲೋಕೇಶ್ವರ ದೇವಾಲಯಕ್ಕೆ ₹20 ಲಕ್ಷ, ದುಗನೂರು ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ₹15 ಲಕ್ಷ ನೀಡಲಾಗಿದೆ.
ಸುಮಾರು 17 ದೇವಾಲಯಗಳಿಗೆ ತಲಾ ₹10 ಲಕ್ಷ ತಲಾ ನೀಡಲಾಗಿದೆ. 87 ಮಠ ಮಂದಿರಗಳಿಗೆ ತಲಾ ₹5 ಲಕ್ಷ, 1 ದೇವಸ್ಥಾನಕ್ಕೆ ₹4 ಲಕ್ಷ, 4 ದೇವಾಯಲಗಳಿಗೆ ₹3 ಲಕ್ಷ, 2 ದೇವಾಲಗಳಿಗೆ ₹2 ಲಕ್ಷ ಸೇರಿ ಒಟ್ಟು 117 ದೇವಾಲಯಗಳಿಗೆ ₹10 ಕೋಟಿ ಅನುದಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





