ಬೆಂಗಳೂರು: ಗೃಹಲಕ್ಷ್ಮೀ ಹಣದಿಂದ ಟಿವಿ, ಫ್ರಿಜ್ ತೆಗೆದುಕೊಂಡಿದ್ದು ಸುದ್ದಿಯಾಗಿತ್ತು. ಇತ್ತೀಚೆಗೆ ಉತ್ತರ ಕರ್ನಾಟಕದ ಮಹಿಳೆಯೊಬ್ಬಳು ಇಡೀ ಊರಿಗೆ ಹೋಳಿಗೆ ಊಟವ್ನೂ ಹಾಕಿಸಿದ್ದರು. ಎರಡು ದಿನಗಳ ಹಿಂದೆ ಮಹಿಳೆಯೊಬ್ಬಳು ತನ್ನ ಮಗನಿಗೆ ಬೈಕ್ಅನ್ನು ಗೃಹಲಕ್ಷ್ಮೀ ಹಣದಲ್ಲಿ ಖರೀದಿ ಮಾಡಿದ್ದರು.
ಈಗ ಬೆಳಗಾವಿಯ ರಾಯಭಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿಯ ಮಹಿಳೆ ಮಲ್ಲವ್ವ ಭೀಮಪ್ಪ ಮೇಟಿ, ಗೃಹಲಕ್ಷ್ಮೀಯಿಂದ ಬಂದ ಹಣದಿಂದ ಗ್ರಾಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಂಟೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾಗಿರುವ ಮಲ್ಲವ್ವ ಭೀಮಪ್ಪ ಮೇಟಿ ಅವರ ಕಾರ್ಯಕಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ತಮ್ಮ ಊರಿನ ಮಕ್ಕಳು ಓದುವುದಕ್ಕಾಗಿಯೇ ಬೆಂಗಳೂರು, ಧಾರವಾಡ, ಬಿಜಾಪುರಕ್ಕೆ ಹೋಗುತ್ತಾರೆ.ಅಲ್ಲಿ ಅವರ ತರಬೇತಿಗೆ ತಿಂಗಳು ತಿಂಗಳು ಹಣದ ಸಮಸ್ಯೆ ಆಗ್ತಿತ್ತು ಊಟ, ಆರೋಗ್ಯದ ಸಮಸ್ಯೆ ಕೂಡ ಕಾಡ್ತಿದ್ದವು. ಅಲ್ಲಿ ಲೈಬ್ರರಿಯಲ್ಲಿ ಕುಳಿತು ಅವರು ಓದುತ್ತಾರೆ. ಇಂಥವರಿಗಾಗಿ ನಮ್ಮಲ್ಲಿಯೇ ಒಂದು ಲೈಬ್ರೆರಿ ಕಟ್ಟಬೇಕು ಅನ್ನೋದು ನನ್ನ ಕನಸಾಗಿತ್ತು. ನನಗೆ ಹದಿಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣ 26 ಸಾವಿರ ರೂಪಾಯಿ ಬಂದಿತ್ತು. ಅದರೊಂದಿಗೆ ಗ್ರಾಮ ಪಂಚಾಯಿತಿ ಮೆಂಬರ್ ಆಗಿರುವ ಕಾರಣಕ್ಕೆ ಗೌರವ ಧನ ಕೂಡ ಸಿಗುತ್ತದೆ.ಈ ಎಲ್ಲಾ ಹಣವನ್ನು ಒಟ್ಟು ಮಾಡಿ ನಾನು ಒಂದು ಸಣ್ಣ ಪ್ರಮಾಣದ ಗ್ರಂಥಾಲಯ ಕಟ್ಟಿದ್ದೇನೆ. ಸಣ್ಣ ಗ್ರಂಥಾಲಯಕ್ಕೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಮಲ್ಲವ್ವ ಭೀಮಪ್ಪ ಮೇಟಿ ಹೇಳಿದ್ದಾರೆ.
ಇನ್ನು ಮಲ್ಲವ್ವ ಭೀಮಪ್ಪ ಮೇಟಿ ಹೆಚ್ಚೇನೂ ಓದಿದವರೂ ಅಲ್ಲ. ಆದರೆ, ತಮ್ಮ ಊರ ಮಕ್ಕಳು ಓದಬೇಕು. ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದಾಗಿ ಹೇಳುತ್ತಾರೆ. ತಮ್ಮ ಇಡೀ ಕುಟುಂಬದಲ್ಲಿ 8 ಮಂದಿ ಇದ್ದಾರೆ. ಕೃಷಿ ಹಾಗೂ ಕುರಿ ಸಾಕಾಣಿಕೆಯೇ ತಮ್ಮ ಕೆಲಸ ಎಂದು ಹೇಳಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

