ಫಿರೋಜಾಬಾದ್ ಜಿಲ್ಲಾ ನ್ಯಾಯಾಲಯವು ಅಮಾಯಕ ಮಗುವಿನ ಕೊಲೆ ಪ್ರಕರಣದಲ್ಲಿ ಆರೋಪಿ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್‌ಗೆ ಘಟನೆ ನಡೆದ ಕೇವಲ 41 ದಿನಗಳಲ್ಲಿ ಮರಣದಂಡನೆ ವಿಧಿಸಿದೆ. ಶೀಘ್ರ ವಿಚಾರಣೆ ನಡೆಸಿದ ನ್ಯಾಯಾಲಯ, ಮಗುವಿನ ಮೇಲಿನ ಕ್ರೂರ ಕೃತ್ಯ ಹಾಗೂ ಸಂತ್ರಸ್ತೆ ತಾಯಿಯ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನಿನ ಅಡಿಯಲ್ಲಿ ಗರಿಷ್ಠ ಶಿಕ್ಷೆ ಪ್ರಕಟಿಸಿದೆ. ತನಿಖೆ ಪ್ರಕಾರ, ಮಗುವಿನ ತಾಯಿಯನ್ನು ಮದುವೆಯಾಗಲು ಬಯಸಿದ್ದ ವಿರಾಜ್‌ಗೆ ಮಗು ಅಡ್ಡಿಯಾಗಿತ್ತು. ಇದೇ ಕಾರಣಕ್ಕೆ ಚಾಕಲೇಟ್ ಕೊಡಿಸುವುದಾಗಿ ಅಮಿಷವೊಡ್ಡಿ ಮಗುವನ್ನು ಕರೆದೊಯ್ದು ನೆಲಕ್ಕೆ ಎಂಟು ಬಾರಿ ಬಡಿದು ಅಮಾನುಷವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಇಂತಹ ಅಪರಾಧಗಳು ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟು ಗಲ್ಲು ಶಿಕ್ಷೆ ವಿಧಿಸಿದೆ. ತ್ವರಿತ ನ್ಯಾಯದಾನದಿಂದ ಅಪರಾಧಿಗಳಿಗೆ ಕಠಿಣ ಸಂದೇಶ ರವಾನೆಯಾಗಿದ್ದು, ಇಂತಹ ಪ್ರಕರಣಗಳೂ ಇದೇ ರೀತಿ ಶೀಘ್ರ ಇತ್ಯರ್ಥವಾಗಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

