ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು #MeToo ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರೋದು ಗೊತ್ತೇ ಇದೆ.ಪ್ರಿಯಾ ರಮಣಿ ಆರೋಪದ ಬೆನ್ನಲ್ಲೇ ಹಲವು ಮಹಿಳೆಯರು ಸಹ ಸಚಿವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಆರೋಪಕ್ಕೆ ಖಡಕ್ಕಾಗಿ ಪ್ರತಿಕ್ರಿಯೆ ನೀಡಿದ್ದ ಸಚಿವ ಅಕ್ಬರ್, ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಾನು ಪ್ರಕರಣವನ್ನು ಎದುರಿಸಲು ತಯಾರಿಗಿದ್ದೀನಿ ಅಂತ ಪ್ರಿಯಾ ರಮಣಿ ಕೂಡ ಹೇಳಿದ್ರು. ಆದ್ರೆ ಈಗ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ 17 ಪತ್ರಕರ್ತೆಯರು ಪ್ರಿಯಾ ಬೆಂಬಲಕ್ಕೆ ನಿಂತಿದ್ದು, ನಮ್ಮ ಸಹೋದ್ಯೋಗಿಗಾದ ದೌರ್ಜನ್ಯದ ವಿರುದ್ಧ ಸಾಕ್ಷ್ಯ ಹೇಳಲು ನಾವು ತಯಾರಿದ್ದೇವೆ ಎಂದು ಹೇಳಿದ್ದಾರೆ.ಇನ್ನು ಸಚಿವ ಅಕ್ಬರ್ರಿಂದ ಇನ್ನೂ ಕೆಲವು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ. ಅದಕ್ಕೆ ನಮ್ಮಲ್ಲೇ ಕೆಲವು ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಹಾಗಾಗಿ ನ್ಯಾಯಾಲಯ ಅಕ್ಬರ್ ವಿರುದ್ಧ ಸಾಕ್ಷ್ಯಗಳಿಗೆ ನಮ್ಮ ಹೇಳಿಕೆಗಳನ್ನು ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದಾರೆ.ಸಚಿವರ ವಿರುದ್ಧ ಹೇಳಿಕೆ ನೀಡಲು ಮುಂದೆ ಬಂದಿರುವ ಖಾಸಗಿ ಪತ್ರಿಕೆಯ ಪತ್ರಕರ್ತೆಯರ ಪೈಕಿ ಮೀನಾಲ್ ಬಾಗೆಲ್, ಮನೀಶಾ ಪಾಂಡೆ, ತುಶಿಟಾ ಪಟೇಲ್, ಕಣಿಕಾ ಗೆಹ್ಲೋಟ್, ಸುಪರ್ಣಾ ಶರ್ಮಾ, ರೆಮೋಲಾ ತಲ್ವಾರ್ ಬದಾಮ್, ಹೊಯ್ನು ಹಝೆಲ್, ಆಯಿಶಾ ಖಾನ್, ಮತ್ತು ಕೂಶಲಾನಿ ಗುಲಾಬ್ ಪ್ರಮುಖರಾಗಿದ್ದಾರೆ. ಇನ್ನುಳಿದಂತೆ ಕಣಿಜಾ ಗಝಾರಿ, ಮಾಳವಿಕಾ ಬ್ಯಾನರ್ಜಿ, ಎ.ಟಿ.ಜಯಂತಿ, ಹಮೀದಾ ಪಾರ್ಕರ್, ಜೋನಾಲಿ ಬುರುಗೋಹೆನ್, ಮೀನಾಕ್ಷಿ ಕುಮಾರ್, ಸುಜಾತಾ ದತ್ತಾ ಸಚ್ದೇವ್ ಮತ್ತು ಸಂಜರಿ ಚಟರ್ಜಿ ಸೇರಿದಂತೆ ಒಟ್ಟು 17 ಜನ ಸಚಿವರ ಅಕ್ಬರ್ ಲೈಂಗಿಕ ದೌರ್ಜನ್ಯದ ವಿರುದ್ಧ ಸಾಕ್ಷ್ಯ ಹೇಳಲು ಮುಂದೆ ಬಂದಿದ್ದಾರೆ.ಇನ್ನು ಇದೇ ವೇಳೆ ನೀಡಿರುವ ಹೇಳಿಕೆಯಲ್ಲಿ, ಮಹಿಳೆಯರು ಅನೇಕ ವರ್ಷಗಳಿಂದ ಈ ರೀತಿಯ ದೌರ್ಜನ್ಯಗಳನ್ನು ಅನುಭವಿಸಿ ಸಹಿಸಿಕೊಂಡು ಬಂದಿದ್ದಾರೆ. ಸಚಿವರು ತಮ್ಮ ವಿರುದ್ಧ ಆರೋಪ ಬಂದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು. ಆದರೆ ಅವರು ದೌರ್ಜನ್ಯಕ್ಕೊಳಗಾದವರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿರುವುದು ಅನೇಕ ಮಹಿಳೆಯರಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





