Breaking News

ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿಯಲ್ಲಿ ಬಸವಣ್ಣನವರ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ

ಮೈಸೂರು : ಐತಿಹಾಸಿಕ ಮೈಸೂರು ದಸರಾದ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಈ ಬಾರಿ ಪ್ರದರ್ಶನಗೊಂಡ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳಲ್ಲಿ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿದ ಸ್ತಬ್ಧಚಿತ್ರವು ಪ್ರಥಮ ಬಹುಮಾನ ಗಳಿಸಿದೆ.
ಸ್ತಬ್ದಚಿತ್ರದ ಮುಂಭಾಗದಲ್ಲಿ ವಿಶ್ವಗುರು ಶ್ರೀ ಜಗಜ್ಯೋತಿ ಬಸವಣ್ಣನವರ ಮಾದರಿ ಪ್ರತಿಕೃತಿಯನ್ನು ಚಿತ್ರಿಸಲಾಗಿತ್ತು. ಬಸವಣ್ಣನವರು ಕುಳಿತ ಪೀಠದ ಕೆಳಭಾಗದಲ್ಲಿ ಕೂಡಲಸಂಗಮದ ಮುಖ್ಯದ್ವಾರದ ಮಾದರಿಯನ್ನು ಚಿತ್ರಿಸಲಾಗಿತ್ತು.
ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನವು ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನವಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಪುನಃ ಸ್ಥಾಪಿಸುವುದು, ಅಸ್ಪೃಶ್ಯತೆ ಮತ್ತು ಇತರ ವಿಷಯಗಳ ಜೊತೆಗೆ ಚರಕ ಮತ್ತು ಖಾದಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುವುದು ಅವರ ಪ್ರಾಥಮಿಕ ಉದ್ದೇಶವಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ಸಂಪೂರ್ಣ ಆವರಣವನ್ನು ವಿಜಯನಗರ ಎಂದು ಹೆಸರಿಸಲಾಗಿತ್ತು.
ಬಿಳಿ, ಹಸಿರು, ಕೇಸರಿ ಮತ್ತು ಧ್ವಜದ ಮಧ್ಯ ಭಾಗದಲ್ಲಿ ಚರಕ ಇರುವ ತ್ರಿವರ್ಣ ಧ್ವಜವನ್ನು ಇಲ್ಲಿ ಮೊದಲ ಬಾರಿಗೆ ಹಾರಿಸಲಾಗಿತ್ತು. ಇದರ ಮಾದರಿ ಪ್ರತಿಕೃತಿಯನ್ನು ಸ್ತಬ್ಧಚಿತ್ರದ ಮಧ್ಯ ಭಾಗದಲ್ಲಿ ತೋರಿಸಲಾಗಿದೆ ಅಧಿವೇಶನವು ಮರದ ಚೌಕಟ್ಟುಗಳಿಂದ ಸುತ್ತುವರಿದ ಎತ್ತರದ ವೇದಿಕೆಯಲ್ಲಿ ಮಹಾತ್ಮ ಗಾಂಧೀಜಿಯವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ಮಾಡಿದ್ದರು. ಹಾಗೂ ಸಾರ್ವಜನಿಕರು ಈ ಭಾಷಣವನ್ನು ವೀಕ್ಷಿಸುತ್ತಿರುವ ಮಾದರಿ ಪ್ರತಿಕೃತಿಯನ್ನು ಮಧ್ಯ ಹಾಗೂ ಹಿಂಭಾಗದಲ್ಲಿ ವಿನ್ಯಾಸಗೊಳಿಸಲಾಗಿತ್ತು.
ಸ್ತಬ್ಧಚಿತ್ರದ ಕೆಳಭಾಗದ ಎರಡು ಕಡೆಗಳಲ್ಲಿ ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ ಬಿಂಬಿಸುವ ಧ್ವಜವನ್ನು ಕೈಯಲ್ಲಿ ಹಿಡಿದಿರುವ ಮಾದರಿಯನ್ನು ಚಿತ್ರಿಸಲಾಗಿತ್ತು. ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಧ್ಯೇಯವಾಕ್ಯದೊಂದಿಗೆ ಆರಂಭಗೊಂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿಯ ಬಗ್ಗೆ ಮಾಹಿತಿ ಫಲಕ‌ ಅಳವಡಿಸಲಾಗಿತ್ತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರ ಪರಿಕಲ್ಪನೆಯಂತೆ, ಕ್ಷೇತ್ರ ಪ್ರಚಾರ ಶಾಖೆ ಜಂಟಿ ನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ. ಅವರು ಸ್ತಬ್ಧಚಿತ್ರ ನಿರ್ಮಾಣಕ್ಕೆ ಶ್ರಮಿಸಿದ್ದರು. ಪ್ರತಿರೂಪಿ ಕಲಾತಂಡದ ಶಶಿಧರ ಅಡಪ ಮತ್ತು ತಂಡದ ಕಲಾವಿದರು ಸ್ತಬ್ಧಚಿತ್ರ ತಯಾರಿಸಿದ್ದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *