ಉಡುಪಿ: ದೇಶದ ಸುಮಾರು 25 ಸಾಂಪ್ರದಾಯಿಕ ಕುಲ ಕಸುಬುಗಳನ್ನು ಪ್ರೋತ್ಸಾಹಿಸಿ ಅಗತ್ಯ ತರಬೇತಿ ಮತ್ತು ಸೌಲಭ್ಯವನ್ನು ಒದಗಿಸಲು ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದ ಪಿಎಂ ವಿಶ್ವಕರ್ಮ ಯೋಜನೆಯ ನೋಂದಣಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶಕ್ಕೆ ಮಾದರಿಯಾಗಿದೆ.
2023ರ ಸೆಪ್ಟಂಬರ್‌ನಲ್ಲಿ ಜಾರಿಯಾದ ಈ ಯೋಜನೆಗೆ ಆರಂಭದಲ್ಲಿ ದೇಶದ ಕೆಲವು ಜಿಲ್ಲೆಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಅನಂತರ ಎಲ್ಲ ಜಿಲ್ಲೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿತ್ತು. ಈವರೆಗೆ ದೇಶದಲ್ಲಿ 2.58 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು, ಮೂರು ಹಂತಗಳ ಪರಿಶೀಲನೆಯ ಬಳಿಕ ಅಂತಿಮ ಹಂತದ ನೋಂದಣಿಗೆ 23.7 ಲಕ್ಷ ಅರ್ಜಿಗಳು ಅರ್ಹವಾಗಿವೆ.
ಅಂತಿಮವಾಗಿ ಈವರೆಗೆ ದೇಶದ 10 ಲಕ್ಷ ಜನರು ಈ ಯೋಜನೆಯ ಫಲಾನುಭವ ಪಡೆಯುತ್ತಿದ್ದಾರೆ.
ಕರ್ನಾಟಕದಿಂದಲೇ 28,78,482 ಅರ್ಜಿಗಳು ಸ್ವೀಕೃತವಾಗಿದ್ದು, ಇದು ದೇಶದಲ್ಲಿ ಅತ್ಯಧಿಕವಾಗಿದೆ. ಮೂರು ಹಂತಗಳ ಪರಿಶೀಲನೆಯ ಅನಂತರ 5,19,346 ಅರ್ಜಿದಾರರು ಯೋಜನೆಯ ಫಲಾನುಭವ ಪಡೆಯಲು ಅರ್ಹರಾಗಿದ್ದಾರೆ. ಬೆಳಗಾವಿಯಿಂದ ಅತೀ ಹೆಚ್ಚು, 2.55 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದರೆ ಕೊಡಗಿನಿಂದ ಅತೀ ಕಡಿಮೆ, 8,899 ಅರ್ಜಿಗಳು ಸಲ್ಲಿಕೆಯಾಗಿವೆ. ತುಮಕೂರಿನಿಂದ 61,706 ಅರ್ಜಿಗಳು ಅಂತಿಮ ಹಂತಕ್ಕೆ ತಲುಪಿದ್ದರೆ ವಿಜಯಪುರದಿಂದ ಅತೀ ಕಡಿಮೆ ಅಂದರೆ 1,138 ಅರ್ಜಿಗಳು ಅಂತಿಮ ಹಂತಕ್ಕೆ ತಲುಪಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

