ನವದೆಹಲಿ: ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುವ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ನಿಯೋಗವು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಕೃಷಿಗೆ ನೆರವು ನೀಡುವ ಉದ್ದೇಶಕ್ಕಾಗಿ ಸಹಕಾರಿ ಸಂಸ್ಥೆಗಳಿಗೆ ನೀಡುವ ಸಾಲದ ಮೊತ್ತವನ್ನು ನಬಾರ್ಡ್ ಕಡಿತಗೊಳಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಸಾಲದ ಮೊತ್ತವನ್ನು ಹೆಚ್ಚಿಸುವಂತೆಯೂ ಮನವಿ ಸಲ್ಲಿಸಿತು.
ರಾಷ್ಟ್ರೀಕೃತ ಬ್ಯಾಂಕ್‌ಗಳು ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಹೀಗಾಗಿ, ನಬಾರ್ಡ್ ಮೂಲಕ ನೀಡುತ್ತಿರುವ ಕೃಷಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಜತೆಗೆ, ಎಲ್ಲ ರಾಜ್ಯಗಳ ಮೊತ್ತವನ್ನು ಕಡಿತಗೊಳಿಸಲಾಗಿದೆ. ಕರ್ನಾಟಕದ ಮೊತ್ತ ಮಾತ್ರ ಕಡಿತವಾಗಿದ್ದಲ್ಲ ಎಂದು ನಿರ್ಮಲಾ ಸಮಜಾಯಿಷಿ ನೀಡಿದರು.
ನಬಾರ್ಡ್ ಮೊತ್ತ ಕಡಿತ ಮಾಡಿದ್ದರಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಾಲ ನೀಡಲು ಸಮಸ್ಯೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕರ್ನಾಟಕಕ್ಕೆ ಪ್ರತ್ಯೇಕ ನೀತಿ ರೂಪಿಸಲು ಸಾಧ್ಯವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು. ಸಾಲ ವಿತರಣೆಯಲ್ಲಿ ಆಗಿರುವ ಸಮಸ್ಯೆಗಳ ಬಗ್ಗೆ ನಿಯೋಗವು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿತು. ಆಗ ಕೇಂದ್ರ ಸಚಿವರು, ಈ ಸಂಬಂಧ ಆರ್‌ಬಿಐ ಗವರ್ನರ್ ಜತೆಗೆ ಸಮಾಲೋಚನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





