ಬೀದರ್: ಸರ್ಕಾರದ ಆದೇಶದಂತೆ ಎಲ್ಲ ಇಲಾಖೆಗಳಲ್ಲಿ ಶೇ 5 ರಷ್ಟು ಅನುದಾನ ಕಡ್ಡಾಯವಾಗಿ ಅಂಗವಿಕಲರ ಕಲ್ಯಾಣ ಯೋಜನೆಗಳಿಗೆ ಬಳಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ವಿವಿಧ ಇಲಾಖೆಗಳ ಅಂಗವಿಕಲರ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದಲ್ಲಿಯೂ ಅಂಗವಿಕಲರಿಗೆ ಶೇ 5ರಷ್ಟು ಮೀಸಲಿಡಬೇಕು. ಕೇಂದ್ರ ಸರ್ಕಾರದ ಪಿ.ಎಂ.ಡಿ.ಕೆ. ಯೋಜನೆಯಡಿ ಬೀದರ್ ಸೇರಿದಂತೆ ರಾಜ್ಯದ ನಾಲ್ಕು ಕಡೆ ಅಂಗವಿಕಲರ ಚಿಕಿತ್ಸೆಗಾಗಿ ₹ 50 ಕೋಟಿ ಅನುದಾನದಲ್ಲಿ ಆಧುನಿಕ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಂಗವಿಕಲರ ಅಭಿವೃದ್ಧಿ ಸಮಿತಿ ಪ್ರತಿ ತಿಂಗಳಿಗೊಮ್ಮೆ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಬೇಕು. ಅಧಿಕಾರಿಗಳು ಅಂಗವಿಕಲರ ಬಗ್ಗೆ ನಿರಾಸಕ್ತಿ ತೋರದೆ ಸಮಸ್ಯೆಗಳು ಪರಿಹರಿಸಬೇಕು. ಒಟ್ಟು 21 ತರಹದ ವಿವಿಧ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಎಲ್ಲಾ ಇಲಾಖೆಗಳ ಕಟ್ಟಡಗಳು ಅಂಗವಿಕಲ ಸ್ನೇಹಿಯಾಗಿರಬೇಕು. ಚಿಕ್ಕ ಮಕ್ಕಳಲ್ಲಿ ಅಂಗವಿಕಲತೆಯನ್ನು ಗುರುತಿಸಿ ತಕ್ಷಣವೇ ಚಿಕಿತ್ಸೆ ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ 7 ಸಾವಿರ ಅಂಗವಿಕಲರು ನೇಮಕವಾಗಿರುವುದು ದಾಖಲೆಯಾಗಿದೆ. ವಸತಿ ಶಾಲೆಗಳಲ್ಲಿ ಯಾವುದೇ ಪರೀಕ್ಷೆ ಇಲ್ಲದೇ ಅಂಗವಿಕಲ ವಿದ್ಯಾರ್ಥಿಗಳು ನೇರವಾಗಿ ಪ್ರವೇಶ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಇಲಾಖಾವಾರು ಅಂಗವಿಕಲರ ಕುರಿತಾದ ಪ್ರಗತಿ ಪರಿಶೀಲನಾ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀಧರ್, ‘ಜಿಲ್ಲೆಯಲ್ಲಿ ಒಟ್ಟು 1.40 ಲಕ್ಷ ಆರು ವರ್ಷದೊಳಗಿನ ಮಕ್ಕಳಿದ್ದು ಪ್ರಸಕ್ತ ಸಾಲಿನಲ್ಲಿ 92 ಸಾವಿರ ಮಕ್ಕಳನ್ನು ಪರೀಕ್ಷಿಸಲಾಗಿ ಇವರಲ್ಲಿ 208 ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲೀಂ ಪಾಷಾ ಮಾತನಾಡಿ, ಎಲ್ಲಾ ಅಂಗವಿಕಲ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು, ಪ್ರತಿ ಬ್ಲಾಕ್ ಹಂತದಲ್ಲಿ ಐ.ಸಿ.ಐ.ಆರ್. ತರಬೇತಿ ಹೊಂದಿದ ಶಿಕ್ಷಕರಿದ್ದಾರೆ ಎಂದರು.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ವಿಶ್ವನಾಥ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





