ಬೆಳಗಾವಿ: ಸರ್ಕಾರಿ ಪದವಿ ಪೂರ್ವ ವಿದ್ಯಾಲಯಗಳಲ್ಲಿ ವಿಜ್ಞಾನ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ಗ್ರಾಮೀಣ ಪ್ರದೇಶದ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿರುವ ಸಿ.ಇ.ಟಿ.-ಸಕ್ಷಮ್ ಎಂಬ ವಿನೂತನ ಮತ್ತು ಸೃಜನಾತ್ಮಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರದ ಮೆಚ್ಚುಗೆ ಜತೆಗೆ ಚಾಲೆಂಜ್ ಫಂಡ್ ಯೋಜನೆಯಡಿ ಹತ್ತು ಲಕ್ಷ ರೂಪಾಯಿ ಅನುದಾನ ಲಭಿಸಿದೆ.
ಜಿಲ್ಲೆಯ ಎಲ್ಲ ಸರಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿ.ಇ.ಟಿ ಎದುರಿಸಲು ಸಕ್ಷಮ ಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಾತ್ಮಕ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಆರಂಭಿಸಿದ್ದು, ಸರಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ಸಿಇಟಿ-ನೀಟ್ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವುದು ಸಿಇಟಿ-ಸಕ್ಷಮ್ ಉದ್ದೇಶವಾಗಿದೆ.
ತಮ್ಮ ಕನಸಿನ ಯೋಜನೆಯಾಗಿರುವ ಸಿಇಟಿ-ಸಕ್ಷಮ್ ಅನುಷ್ಠಾನಕ್ಕೆ ಸರಕಾರವು ಅನುದಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ಮುಂಬರುವ ದಿನಗಳಲ್ಲಿ ಸಿಇಟಿ-ಸಕ್ಷಮ್ ಸಮರ್ಪಕ ಅನುಷ್ಠಾನ, ವಿಶ್ಲೇಷಣೆ ಹಾಗೂ ದತ್ತಾಂಶ ಸಂಗ್ರಹಕ್ಕೆ ವಿಶೇಷ ಸಾಪ್ಟವೇರ್ ರೂಪಿಸಲಾಗುವುದು ಎಂದು ರಾಹುಲ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





