Breaking News

ಸಂಸತ್ ನಲ್ಲಿ 75ನೇ ಸಂವಿಧಾನ ದಿನ ಆಚರಣೆ

ನವದೆಹಲಿ: ಇಂದು ದೇಶದಲ್ಲಿ ಭಾರತೀಯ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಇಂದು ಹಳೆಯ ಪಾರ್ಲಿಮೆಂಟ್ ಭವನದಲ್ಲಿ 75ನೇ ಸಂವಿಧಾನ ದಿನವನ್ನು ಆಚರಿಸಲಾಯಿತು.ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಂಸತ್ ಸದಸ್ಯರೆಲ್ಲರೂ ಲೋಕಸಭೆಯಲ್ಲಿ ಹಾಜರಿದ್ದರು.
75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನ ದಿನದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು. ಇದರ ಜೊತೆಗೆ ಸಂವಿಧಾನ ದಿನದ 75 ನೇ ವಾರ್ಷಿಕೋತ್ಸವದ ಸಲುವಾಗಿ ಅಂಚೆ ಚೀಟಿಯನ್ನು ಕೂಡ ಬಿಡುಗಡೆ ಮಾಡಿದರು.
ಇದರ ಜೊತೆಗೆ ಸಂವಿಧಾನಕ್ಕೆ ಮೀಸಲಾದ ಎರಡು ಕಿರು ಪುಸ್ತಕಗಳನ್ನು ರಾಷ್ಟ್ರಪತಿ ಬಿಡುಗಡೆ ಮಾಡಿದರು. ‘ಮೇಕಿಂಗ್ ಆಫ್ ದಿ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾ, ಎ ಗ್ಲಿಂಪ್ಸ್’. ಮತ್ತು ‘ಮೇಕಿಂಗ್ ಆಫ್ ದಿ ಕಾನ್ ಸ್ಟಿಟ್ಯೂಷನ್ ಆಫ್ ಇಂಡಿಯಾ ಅಂಡ್ ಇಟ್ಸ್ ಗ್ಲೋರಿಯಸ್ ಜರ್ನಿ’ ಎಂಬ ಹೆಸರಿನ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಇನ್ನೊಂದು ವಿಶೇಷ ಅಂದರೆ ಇದೇ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಇದೇ ಮೊದಲ ಬಾರಿಗೆ ಭಾರತದ ಸಂವಿಧಾನವನ್ನು ಸಂಸ್ಕೃತ ಮತ್ತು ಮೈಥಿಲಿ ಭಾಷೆಯಲ್ಲಿ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ವಾಗತ ಭಾಷಣ ಮಾಡಿ, 75 ವರ್ಷಗಳ ಹಿಂದೆ ಇದೇ ದಿನ ನಮ್ಮ ಸಂವಿಧಾನವನ್ನು ಅಂಗೀಕರಿಸಲಾಯಿತು. ಇಂದು ಇಡೀ ದೇಶ ಸಂವಿಧಾನಕ್ಕೆ ಕೃತಜ್ಞತೆ ಸಲ್ಲಿಸುತ್ತಿದೆ. 2015 ರಲ್ಲಿ, ನಾವು ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ. ನಮ್ಮ ಒಪ್ಪಂದವು ವರ್ಷಗಳ ಸ್ಥಿರತೆ, ಶಕ್ತಿ ಮತ್ತು ಸಾಮರ್ಥ್ಯದ ಫಲಿತಾಂಶವಾಗಿದೆ. ಪ್ರಸ್ತುತ, ಭಾರತೀಯ ಸಂವಿಧಾನದ ವೈಭವ, ಅದರ ರಚನೆ ಮತ್ತು ಐತಿಹಾಸಿಕ ಪಯಣವನ್ನು ಬಿಂಬಿಸುವ ಕಿರುಚಿತ್ರವನ್ನು ಸಹ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.
ನಂತರ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, ಇದೊಂದು ಐತಿಹಾಸಿಕ ಕ್ಷಣ. ಸಂವಿಧಾನದ ಅನುಷ್ಠಾನದ 75ನೇ ವರ್ಷಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಈ 75 ವರ್ಷಗಳಲ್ಲಿ ನಾವು ಅನೇಕ ದೊಡ್ಡ ಸಾಧನೆಗಳನ್ನು ಮಾಡಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ಸಂವಿಧಾನದಿಂದಲೇ. ಯಾವುದೇ ಸಂದರ್ಭದಲ್ಲೂ ನಾವು ಸಂವಿಧಾನವನ್ನು ಗೌರವಿಸಬೇಕು. ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಸಂವಿಧಾನ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಭಾರತದ ಸಂವಿಧಾನವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಂಟ್ರಲ್ ಹಾಲ್ ತಲುಪುತ್ತಿದ್ದಂತೆ ರಾಷ್ಟ್ರಗೀತೆ ಪ್ರಾರಂಭವಾಯಿತು. ಉಪರಾಷ್ಟ್ರಪತಿ, ಲೋಕಸಭಾ ಸ್ಪೀಕರ್ ಮತ್ತು ಇತರ ಅತಿಥಿಗಳು ಅವರೊಂದಿಗೆ ಉಪಸ್ಥಿತರಿದ್ದರು. ನಂತರ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಉದ್ದೇಶಿಸಿ ದ್ರೌಪದಿ ಮುರ್ಮು ಭಾಷಣ ಆರಂಭಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *