ಕಲಬುರಗಿ: ರಾಜ್ಯ ಸರ್ಕಾರ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆಗೆ ನೀಡುತ್ತಿದ್ದ ಅನುದಾನದಲ್ಲಿ ಶೇ.80ರಷ್ಟು ಕಡಿತಗೊಳಿಸಿ, ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಆರ್‌ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಅವರು ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ಇತ್ತೀಚೆಗೆ ಸಿಎಂ ಅವರು ಡಿಸಿಗಳು ಮತ್ತು ಸಿಇಒಗಳ ಜೊತೆ ಮೀಟಿಂಗ್ ಮಾಡುವ ಸಂದರ್ಭದಲ್ಲಿ ರಿಪೋರ್ಟ್‌ಗಳಲ್ಲಿ ವ್ಯತ್ಯಾಸ ಇದ್ದವು. ನಮ್ಮದೊಂದು ರೀತಿಯ ರಿಪೋರ್ಟ್ ಇತ್ತು. ನೀತಿ ಆಯೋಗದ ರಿಪೋರ್ಟ್ ಇನ್ನೊಂದು ರೀತಿ ಇತ್ತು. ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯಲ್ಲಿ ಬಹಳ ತಾರತಮ್ಯ ಇದೆ ಎನ್ನುವುದು ಕಂಡುಬಂತು. ಹೀಗಾಗಿ ಅದನ್ನು ಸರಿಪಡಿಸುವುದು ಹೇಗೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವ ಬಗ್ಗೆ ಅಥವಾ ಪರಿಷ್ಕರಿಸುವ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಹೇಳಿದರು.
ಬಿಪಿಎಲ್ ಕಾರ್ಡಗಳಲ್ಲಿ ಫೇಕ್ ಏನಾದರೂ ಇದ್ದರೆ ಅದನ್ನು ಸರಿಪಡಿಸುವ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ ಹೊರತು ಯಾವುದೇ ರೀತಿಯಾದಂತಹ ಮಾನದಂಡ ಪರಿಸ್ಕರಿಸುವ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆರ್ ಡಿಪಿಆರ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ಅನುದಾನ ಹೆಚ್ಚಿಸಲಾಗಿದೆ. ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಗೆ ಸಲ್ಲಿಸಿರುವ ಕ್ರಿಯಾ ಯೋಜನೆ ಆಧಾರದ ಮೇಲೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





