Breaking News

ಆಲಮಟ್ಟಿ ಮತ್ತು ಯಾದಗಿರಿ ನಡುವೆ ರೈಲು ಮಾರ್ಗ ಬೇಡಿಕೆ ಮತ್ತೆ ಮುನ್ನಲೆಗೆ

ಯಾದಗಿರಿ: ವಿಜಯಪುರದ ಆಲಮಟ್ಟಿ ಮತ್ತು ಯಾದಗಿರಿ ನಡುವಣ 91 ವರ್ಷದ ಹಳೆಯದಾದ ರೈಲು ಮಾರ್ಗ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
1933ರ ದಶಕದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಈ ಮಾರ್ಗದಲ್ಲಿ ರೈಲ್ವೆ ಯೋಜನೆ ಯೋಜಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಂಗ್ರಾಮ ತೀವ್ರಗೊಂಡ ನಂತರ ಅದನ್ನು ನಿಲ್ಲಿಸಲಾಗಿತ್ತು.
ಪ್ರಸ್ತಾವಿತ ರೈಲು ಮಾರ್ಗವು ಅನುಷ್ಠಾನಗೊಂಡರೆ, ವಿಶಾಖಪಟ್ಟಣಂ ಅನ್ನು ಗೋವಾಕ್ಕೆ ಸಂಪರ್ಕಿಸುತ್ತದೆ. ಕರ್ನಾಟಕದ ಎರಡು ಪ್ರಮುಖ ಪ್ರದೇಶಗಳಾದ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಬೆಸೆಯಲಿದೆ. ಆಲಮಟ್ಟಿ, ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟೆ, ಹುಣಸಗಿ, ಸುರಪುರ, ಹತ್ತಿಗೂಡುರು, ವಡಗೇರಾ ಮತ್ತು ಯಾದಗಿರಿಯನ್ನು ಈ ಸಂಭಾವ್ಯ ಮಾರ್ಗವು ಒಳಗೊಳ್ಳಲಿದೆ.
ಯಾದಗಿರಿ ಜಿಲ್ಲೆಯ ಹಿಂದುಳಿದ ಭಾಗವಾಗಿರುವ ಹುಣಸಗಿ ತಾಲ್ಲೂಕು ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿದೆ. ಪ್ರಸ್ತುತ, ಹುಣಸಗಿಯಿಂದ ಯಾವುದೇ ರೈಲು ನಿಲ್ದಾಣವು ಕನಿಷ್ಠ 80 ಕಿ.ಮೀ ದೂರವಿದೆ. ಇಲ್ಲಿಯ ನಿವಾಸಿಗಳು ಮತ್ತು ವ್ಯಾಪಾರಸ್ಥರಿಗೆ ಸಾರಿಗೆ ಸಮಸ್ಯೆ ಇದೆ.
ಇತ್ತೀಚೆಗೆ ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿಯ ನಿಯೋಗ ರಾಯಚೂರು ಸಂಸದ ಜಿ.ಕುಮಾರನಾಯಕ ಅವರನ್ನು ಭೇಟಿ ಮಾಡಿದ್ದಾರೆ. ಆಲಮಟ್ಟಿ-ಯಾದಗಿರಿ ನಡುವಣ ಹಳೆಯ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಮತ್ತೆ ಧ್ವನಿ ಎತ್ತಿದ್ದಾರೆ.
ಇತ್ತೀಚೆಗೆ ಯಾದಗಿರಿಯಲ್ಲಿ ರಾಯಚೂರು ಸಂಸದ ಜಿ.ಕುಮಾರನಾಯಕ ಅವರನ್ನು ಭೇಟಿ ಮಾಡಿದ್ದೇವೆ. ಅವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಡಿ.9ರಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ.ಸೋಮಣ್ಣ ಅವರನ್ನು ಭೇಟಿ ಮಾಡಲು ದೆಹಲಿಗೆ ಬರುವಂತೆ ಹೇಳಿದ್ದರು. ಈಗ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ತಿಳಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆಯಿಂದ ಗುರುತಿಸಿಕೊಂಡಿರುವ ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಿಸಲು ಈ ರೈಲು ಮಾರ್ಗ ಹೆಚ್ಚು ನೆರವಾಗಲಿದೆ. ವಿಜಯಪುರ ಮತ್ತು ಯಾದಗಿರಿ ನಡುವಣ ಪ್ರಸ್ತುತ ರೈಲು ಮಾರ್ಗದ ದೂರವು 328 ಕಿ.ಮೀಗಳಷ್ಟಿದೆ. ಜನರು ಹೊಟಗಿ, ಕಲಬುರಗಿ ಮತ್ತು ವಾಡಿ ಮೂಲಕ ಯಾದಗಿರಿಗೆ ಪ್ರಯಾಣಿಸುತ್ತಿದ್ದಾರೆ. ಹೊಸ ರೈಲ್ವೆ ಮಾರ್ಗ ಅನುಷ್ಠಾನವಾದರೆ ಅಂದಾಜು 165-170 ಕಿ.ಮೀ ಸಂಚಾರ ಉಳಿಯಲಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *