ಬೆಳಗಾವಿ: ಪ್ರಸಕ್ತ ಸಾಲಿಗೆ 3.46 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದ ರಾಜ್ಯ ಸರಕಾರ ಸೋಮವಾರ ವಿಧಾನಸಭೆಯಲ್ಲಿ ಪೂರಕ ಅಂದಾಜುಗಳ ಎರಡನೇ ಕಂತನ್ನು ಮಂಡಿಸಿದ್ದು, ಹೆಚ್ಚುವರಿಯಾಗಿ 5,317.83 ಕೋಟಿ ರೂ. ಬಳಕೆಗೆ ಅವಕಾಶ ಮಾಡಿಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ 2024-25ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತನ್ನು ಮಂಡಿಸಿದರು.
ಇದರಲ್ಲಿ ಸಂಚಿತ ನಿಧಿಯಿಂದ 3,012.88 ಕೋಟಿ ರೂ. ಹಾಗೂ ಕೇಂದ್ರ ಸಹಾಯಕ್ಕೆ ಸಂಬಂಧಿಸಿದ 1,199.94 ಕೋಟಿ ರೂ. ಸಹ ಸೇರಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಿರ್ವಹಣೆಗೆ ಹೆಚ್ಚುವರಿಯಾಗಿ 7.42 ಕೋಟಿ ರೂ.ಗಳನ್ನು ಪೂರಕ ಅಂದಾಜಿನಲ್ಲಿ ಮೀಸಲಿಟ್ಟಿದ್ದು, ಬೆಳಗಾವಿಯಲ್ಲಿ ಡಿ. 26 ಮತ್ತು 27ರಂದು ನಡೆಯಲಿರುವ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವಕ್ಕೆ ಹೆಚ್ಚುವರಿಯಾಗಿ 8 ಕೋಟಿ ರೂ. ಒದಗಿಸಿದೆ.
ಶಾಸಕರ ವಾಹನ ಖರೀದಿಗೆ 2 ಕೋಟಿ ರೂ. ಮುಂಗಡ ಮಂಜೂರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಮೋಟಾರು ವಾಹನ ಖರೀದಿಗೆ 5.40 ಕೋಟಿ ರೂ., ವಿಧಾನಸಭೆ ಉಪಚುನಾವಣೆಗಳ ಇತರ ವೆಚ್ಚಕ್ಕಾಗಿ ಮುಖ್ಯ ಚುನಾವಣಾಧಿಕಾರಿಗೆ ಹೆಚ್ಚುವರಿಯಾಗಿ 2.11 ಕೋಟಿ ರೂ. ಮತ್ತು ವಿಧಾನಸಭಾ ಸದಸ್ಯರ ವೈದ್ಯಕೀಯ ವೆಚ್ಚ ಮರುಪಾವತಿಗೆ 1.25 ಕೋಟಿ ರೂ., ಮಾಜಿ ಸದಸ್ಯರ ವೈದ್ಯಕೀಯ ವೆಚ್ಚ ಮರುಪಾವತಿಗೆ 3 ಕೋಟಿ ರೂ., ಮೇಲ್ಮನೆ ಸದಸ್ಯರ ಸಾಮಾನ್ಯ ವೆಚ್ಚಕ್ಕೆ 23 ಲಕ್ಷ ರೂ., ಸದಸ್ಯರ ಆಪ್ತ ಸಹಾಯಕರ ವೇತನ ಪಾವತಿಸಲು 92 ಲಕ್ಷ ರೂ.ಗಳನ್ನು ಒದಗಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

