Breaking News

ಹೊಸಪೇಟೆಯಲ್ಲಿ ಅಂಬೇಡ್ಕರ್ ಅಪಮಾನ ಖಂಡಿಸಿ ಅಮಿತ್‌ ಶಾ ವಿರುದ್ಧ ಪ್ರತಿಭಟನೆ

ಹೊಸಪೇಟೆ: ಸಂಸತ್‌ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ವತಿಯಿಂದ ಇಂದು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಶಾ ಭಾವಚಿತ್ರಗಳಿಗೆ ಚಪ್ಪಲಿ ಏಟು ನೀಡಿದರು ಹಾಗೂ ಕೊನೆಯಲ್ಲಿ ಭಾವಚಿತ್ರಗಳನ್ನು ಸುಟ್ಟು ಹಾಕಿದರು.
ಬಿಜೆಪಿ ಮನುವಾದಿ ಪಕ್ಷ, ಆ ಪಕ್ಷದ ನಿಜವಾದ ಬಣ್ಣ ಈಗ ಮತ್ತೊಮ್ಮೆ ಬಯಲಾಗಿದೆ. ಅಮಿತ್ ಶಾ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು, ಮುಂಬರುವ ಚುನಾವಣೆ ವೇಳೆ ಅಂಬೇಡ್ಕರ್‌ ಪರ ನಿಲುವ ಇರುವ ಎಲ್ಲರೂ ಬಿಜೆಪಿಯಿಂದ ಹೊರಬರಬೇಕು, ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಪ್ರತಿಭಟನೆ ವೇಳೆ ಮಾತನಾಡಿದ ಹಲವು ನಾಯಕರು ಒತ್ತಾಯಿಸಿದರು.
ಭೀಮವಾದ ದಲಿತ ಸಂಘರ್ಷ ಸಮಿತಿ, ಸ್ಲಂ ಜನರ ಸಂಘಟನೆ-ಕರ್ನಾಟಕ, ಜಿಲ್ಲಾ ಛಲವಾದಿ ಮಹಾಸಭಾ ಸಹಿತ ಹಲವು ಸಂಘಟನೆಗಳ ವತಿಯಿಂದ ಈ ಪ್ರತಿಭಟನೆ ನಡೆಯಿತು. ಮುಖಂಡರಾದ ಬಣ್ಣದಮನೆ ಸೋಮಶೇಖರ್, ಸಣ್ಣ ಮಾರೆಪ್ಪ, ದೇಶಿ ಈರಣ್ಣ, ರಾಮಚಂದ್ರ, ರಾಮಕೃಷ್ಣ, ಪ್ರಕಾಶ್, ಶಿವಕುಮಾರ್ ಜೆ., ಸ್ಲಂ ವೆಂಕಟೇಶ್‌, ಪೂಜಾರಿ ದುರುಗಪ್ಪ, ವಾಸುದೇವ್, ಎರ್ರಿಸ್ವಾಮಿ, ಗಿರೀಶ್, ರಮೇಶ್‌, ಕಮಲಾಪುರ ಸಣ್ಣ ಈರಪ್ಪ ಇತರರು ಇದ್ದರು.
ಹತ್ತಾರು ಬಾರಿ ಅಂಬೇಡ್ಕರ್, ಅಂಬೇಡ್ಕರ್ ಎಂದು ಘೋಷಣೆ ಕೂಗುವ ಮೂಲಕ ಅಮಿತ್ ಶಾ ಹೇಳಿಕೆಯನ್ನು ಲೇವಡಿ ಮಾಡುವ ಪ್ರಯತ್ನವನ್ನೂ ನಡೆಸಲಾಯಿತು.
ಡಿವೈಎಫ್‌ಐ ಖಂಡನೆ: ಅಂಬೇಡ್ಕರ್ ವಿರುದ್ಧ ಗೃಹ ಸಚಿವರು ನೀಡಿರುವ ಅಗೌರವದ ಹೇಳಿಕೆ ಖಂಡನೀಯ; ಸಂವಿಧಾನ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಸಂಘಟನೆ ಆಗ್ರಹಿಸಿದೆ.
ಡಿಸೆಂಬರ್ 17ರಂದು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮತ್ತು ಅಗೌರವದ ಹೇಳಿಕೆಯನ್ನು ಡಿವೈಎಫ್‌ಐ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಖಂಡಿಸುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಗೇಲಿ ಮಾಡುವ ಅಮಿತ್ ಶಾ ಹೇಳಿಕೆಯು ಬಿಜೆಪಿ ಮತ್ತು ಅದರ ಸಿದ್ಧಾಂತವು ಅಂಬೇಡ್ಕರ್ ಅವರ ಜೀವನ, ಪರಂಪರೆ ಮತ್ತು ಪಾಠಗಳ ಬಗ್ಗೆ ಹೊಂದಿರುವ ಆಳವಾದ ತಿರಸ್ಕಾರವನ್ನು ಬಹಿರಂಗಪಡಿಸುತ್ತದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹ ಸಚಿವರು ತಮ್ಮ ನಾಚಿಕೆಗೇಡಿನ ಹೇಳಿಕೆಯನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *