ರಾಯಚೂರು: ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಗಳಲ್ಲಿ ನಡೆದ ಅಕ್ರಮ ಕುರಿತು ರಾಜ್ಯ ಸಾಮಾಜಿಕ ಲೆಕ್ಕಪರಿಶೋಧನಾ ಸಮಿತಿ ನೀಡಿದ ವರದಿ ಆಧರಿಸಿ ಇಬ್ಬರು ಅಧಿಕಾರಿಗಳ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿರ್ದೇಶನದ ಮೇರೆಗೆ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಅಣ್ಣರಾವ್ ನೀಡಿದ ದೂರಿನಂತೆ ತಾಲ್ಲೂಕು ಪಂಚಾಯಿತಿಯ ಹಿಂದಿನ ಇಒ ಪಂಪಾಪತಿ ಹಿರೇಮಠ, ನಿರ್ಗಮಿತ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಬಸಣ್ಣ ನಾಯಕ ಹೇಮನೂರು ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 465, 409, 420, 34ರ ಅಡಿ ದಾಖಲಾಗಿದೆ.
ನರೇಗಾ ಯೋಜನೆಯಡಿ 2020-21, 2021-22 ಹಾಗೂ 2022-23ರವರೆಗೆ ನಡೆದ ಕಾಮಗಾರಿ ಅನುಷ್ಠಾನಗೊಂಡ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹11.64 ಕೋಟಿ ಮತ್ತು ಅನುಷ್ಠಾನಗೊಂಡ ಕಾಮಗಾರಿಗಳ ಕಡತಗಳನ್ನು ನಿರ್ವಹಿಸದೆ ₹32.51 ಕೋಟಿಯನ್ನು ಅಕ್ರಮವಾಗಿ ಪಾವತಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ₹102.32 ಕೋಟಿಯನ್ನು ಶ್ರೀ ಮಾರುತೇಶ್ವರ ಎಂಟರ್‌ಪ್ರೈಸಸ್‌ಗೆ ನಿಯಮ ಮೀರಿ ಪಾವತಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





