ಧಾರವಾಡ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಿಂದ ಸರ್ಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಸ್ಪಷ್ಟನೆ ಕೆಳಲಾಗಿದೆ. ಲಾಠಿಚಾರ್ಜ್ ವಿರುದ್ಧ ಜಯಮೃತ್ಯುಂಜಯ ಶ್ರೀ, ಪಂಚಮಸಾಲಿ ವಕೀಲರ ಪರಿಷತ್ ಸೇರಿದಂತೆ ಧಾರವಾಡ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಇದೀಗ ನೋಟಿಸ್ ಜಾರಿ ಮಾಡಲಾಗಿದೆ.
ರಿಟ್ ಅರ್ಜಿ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಾಠಿಚಾರ್ಜ್ ಬಳಿಕ 12 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ರದ್ದುಪಡಿಸಬೇಕೆಂದು ನಾವು ಸರ್ಕಾರಕ್ಕೆ ಕೇಳಿದ್ದೆವು. ಲಾಠಿಚಾರ್ಜ್ ಸಂಬಂಧ ಸಿಎಂ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದೆವು. ಆದರೆ ಯಾವುದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಪರವಾಗಿ ಪ್ರಭುಲಿಂಗ ನಾವದಗಿ, ಪೂಜಾ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶ ಆಗಿದೆ. ಹಲ್ಲೆ ಆಗಿದ್ದಕ್ಕೆ ಪಂಚಮಸಾಲಿ ಸಮಾಜದವರು ಧೃತಿಗೆಡುವುದು ಬೇಡ. ಡಿ.23ರಂದು ಹಲ್ಲೆಗೊಳಗಾದವರ ಮನೆಗಳಿಗೆ ಭೇಟಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ನ್ಯಾಯವಾದಿ ಪೂಜಾ ಸವದತ್ತಿ ಪ್ರತಿಕ್ರಿಯಿಸಿದ್ದು, ಹೋರಾಟದ ವೇಳೆ 144 ಸೆಕ್ಷನ್ ಜಾರಿ ಆಗಿರಲಿಲ್ಲ. ನೇರವಾಗಿ ಲಾಠಿಚಾರ್ಜ್ ಮಾಡಿದ್ದಾರೆ. ಇದನ್ನೆಲ್ಲ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಲಾಠಿಚಾರ್ಜ್ ಬಳಿಕ ಪುನಃ ಸತ್ಯಾಗ್ರಹವಿತ್ತು. ಸ್ವಾಮೀಜಿ ಡಿ. 19ರವರೆಗೆ ಹೋರಾಟದಲ್ಲಿದ್ದರು. ಹೀಗಾಗಿ ನಿನ್ನೆ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ.
ಪ್ರಭುಲಿಂಗ ನಾವದಗಿ ಮತ್ತು ನಾವು ಕೇಸ್ ರೆಡಿ ಮಾಡಿ ಅರ್ಜಿ ಹಾಕಿದ್ದೇವೆ. ಮಧ್ಯಾಹ್ನ ವಿಚಾರಣೆ ಮಾಡಿ ನೋಟಿಸ್ ಜಾರಿಗೆ ಆದೇಶ ಆಗಿದೆ. ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಂಗ ಆಯೋಗದಿಂದ ಕಮಿಟಿ ರಚನೆಗೆ ಆಗ್ರಹಿಸಿದ್ದೇವೆ. ಲಾಠಿಚಾರ್ಜ್ ಮಾಡಲು ಕೊಟ್ಟವರ ವಿರುದ್ಧ ಕ್ರಮ ಆಗಬೇಕು. ಈ ಸಂಬಂಧ ತನಿಖೆ ಆಗಬೇಕು. ಸರ್ಕಾರದ ಹತ್ತು ಅಂಗಗಳಿಗೆ ಪ್ರತಿವಾದಿ ಮಾಡಲಾಗಿದೆ. ಸರ್ಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆ ಒಳಗೊಂಡಿದೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





