Breaking News

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ರಾಜ್ಯ ಸರ್ಕಾರ ಒಪ್ಪಿಗೆ

ಬೆಂಗಳೂರು: ನಷ್ಟದಲ್ಲಿರುವ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ರಾಜ್ಯ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಕೊಂಕಣ ರೈಲ್ವೆಯನ್ನು ಲಾಭಕ್ಕೆ ತರಲು ಸಾಧ್ಯವಾಗದೇ, ಆಧುನೀಕರಣ ಕಾರ್ಯವೂ ಸಾಧ್ಯವಾಗದೇ ಏಗುತ್ತಾ ಸಾಗುತ್ತಿರುವುದರಿಂದ ವಿಲೀನಕ್ಕೆ ಕೊಂಕಣ ರೈಲ್ವೆ ನಿಗಮವೂ ಸಜ್ಜಾಗಿದೆ.
ಕೊಂಕಣ ರೈಲ್ವೆ ನಿಗಮದಲ್ಲಿ ಕರ್ನಾಟಕ ಸರ್ಕಾರ ಶೇ 11.62 ರಷ್ಟು ಈಕ್ವಿಟಿ ಷೇರು (₹270 ಕೋಟಿ) ಹೊಂದಿದೆ.
ಕೊಂಕಣ ರೈಲ್ವೆ ನಿಗಮ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಮುಂದಿನ 15 ವರ್ಷಗಳಿಗೆ ₹9,158 ಕೋಟಿ ಅಗತ್ಯವಿದೆ. ಇದಕ್ಕೆ ಕರ್ನಾಟಕ ತನ್ನ ಪಾಲನ್ನು ನೀಡಬೇಕು. ತನ್ನ ಪಾಲು ಹೂಡಿಕೆ ಮಾಡಲು ಸಾಧ್ಯವಾಗದೇ ಇದ್ದರೆ, ಷೇರುಗಳನ್ನು ಭಾರತೀಯ ರೈಲ್ವೆ ಮಂತ್ರಾಲಯಕ್ಕೆ ಬಿಟ್ಟುಕೊಡುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಕೊಂಕಣ ರೈಲ್ವೆ ನಿಗಮವು ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯದ ಹಣಕಾಸು ಇಲಾಖೆ, ನಿಗಮದಿಂದ ಈಕ್ವಿಟಿ ಷೇರುಗಳ ಹಿಂಪಡೆಯುವಿಕೆ, ನಿಗಮದಿಂದ ಹೊರಬರಲು ಇರುವ ಉತ್ತಮ ಆಯ್ಕೆಗಳು ಹಾಗೂ ಇದಕ್ಕಾಗಿ ನಡೆಸಬೇಕಾದ ಮೌಲ್ಯಮಾಪನ ವಿಧಾನದ ಬಗ್ಗೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಕೊಂಕಣ ರೈಲ್ವೆ ನಿಗಮಕ್ಕೆ ಪತ್ರ ಬರೆಯಬೇಕು ಎಂದು ಸೂಚಿಸಿದೆ.
ಕೊಂಕಣ ರೈಲ್ವೆ ನಿಗಮದಿಂದ ಹೊರಬರುವ ಮತ್ತು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಇತ್ತೀಚೆಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ವಿ.ಸುನಿಲ್‌ ಕುಮಾರ್‌, ‘ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ಸಂಬಂಧ ಗೋವಾ ರಾಜ್ಯ ಒಪ್ಪಿಗೆ ನೀಡಿದೆ. ನಾವು ಕೂಡ ವಿಲೀನಕ್ಕೆ ಇರುವ ಅಡೆ ತಡೆಗಳನ್ನು ನಿವಾರಿಸಬೇಕು. ಆಧುನೀಕರಣದ ಜತೆ ಹೊಸ ರೈಲುಗಳನ್ನು ಆರಂಭಿಸಿದರೆ ಉತ್ತಮ’ ಎಂದು ಹೇಳಿದ್ದಾರೆ.

Share News

About bigtvnews22

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *