Breaking News

ಫಲಾನುಭವಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಲಾಭವನ್ನು ತಲುಪಿಸಿ: ಕೇಂದ್ರ ಸಚಿವ ಎಚ್ ಡಿ ಕೆ ಸೂಚನೆ

ಮೈಸೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಮಾಡಬೇಕು’ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ತಮ್ಮ ಅಧ್ಯಕ್ಷತೆಯಲ್ಲಿ ಮೊದಲಿಗೆ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ’ (ದಿಶಾ) ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರದಿಂದ ದೇಶದ ಪ್ರಗತಿಗೆ ಪೂರಕವಾದ ಹಲವು ಯೋಜನೆಗಳನ್ನು ನೀಡಿದ್ದೇವೆ. ವೈಯಕ್ತಿಕವಾಗಿ, ಬಡ ಕುಟುಂಬಗಳು ಹಾಗೂ ಮಹಿಳೆಯರ ಆರ್ಥಿಕ ಶಕ್ತಿ ವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯವೂ ಮಾಡಿದೆ. ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಗುರಿಯನ್ನಷ್ಟೆ ನೋಡದೇ, ಅರ್ಜಿ ಹಾಕಿದವರು ಅರ್ಹರಿದ್ದರೆ ಅಂಥವರನ್ನೂ ಪರಿಗಣಿಸಬೇಕು’ ಎಂದು ಹೇಳಿದರು.
ರೈತರು ಕ್ಲಸ್ಟರ್ ಗ್ರೂಪ್‌ಗಳನ್ನು ಮಾಡಿಕೊಂಡು ಅನುದಾನ ಪಡೆಯುವಂತೆ ನೋಡಿಕೊಳ್ಳಬೇಕು. ಮುದ್ರಾ, ಪಿಎಂ- ವಿಶ್ವಕರ್ಮ ಮೊದಲಾದ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಬಡವರು, ಹೆಣ್ಣು ಮಕ್ಕಳು ಹಾಗೂ ಯುವಕರು ಆರ್ಥಿಕವಾಗಿ ಸದೃಢವಾಗಿಸಲು ಬಹಳಷ್ಟು ಅವಕಾಶವಿದೆ’ ಎಂದರು.
ಆದಿವಾಸಿಗಳಿಗೂ ಹಲವು ಕಾರ್ಯಕ್ರಮ ಇವೆ. ಅವುಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ಕೊಡಬೇಕು. ನಿತ್ಯವೂ ಕೆಲವರಿಗೆ ಒಳ್ಳೆಯದು ಮಾಡಬೇಕು ಎಂಬ ಮನೋಭಾವ ಅಧಿಕಾರಿಗಳಿಗಿರಬೇಕು. ಅದು ಮನಸ್ಸಿಗೆ ನೆಮ್ಮದಿ ನೀಡುತ್ತದೆ’ ಎಂದು ತಿಳಿಸಿದರು.
ಯುವಕರು ದಾರಿ ತಪ್ಪುತ್ತಿದ್ದಾರೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಕೊಡುವುದು ಕಷ್ಟ. ಕೆಲಸ ಕೊಡುವುದೇ ಈಗಿರುವ ದೊಡ್ಡ ಸವಾಲು. ಆದ್ದರಿಂದ, ಸ್ವಂತ ಉದ್ಯೋಗ ಕಂಡುಕೊಳ್ಳಲು ಯುವಜನರಿಗೆ ತರಬೇತಿ ಕೊಡಬೇಕು. ಅಧಿಕಾರಿಗಳು ಈ‌ ನಿಟ್ಟಿನಲ್ಲಿ ಉತ್ಸಾಹದಿಂದ ಕೆಲಸ ಮಾಡಬೇಕು. ಆರ್ಥಿಕ ನೆರವು ಬಳಕೆ ಆಗುವಂತೆ ಮಾಡಬೇಕು ಎಂದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *