ದಕ್ಷಿಣ ಕನ್ನಡ: ‘ಭಾರತ ಹಿಂದೆಂದಿಗಿಂತಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ, ಕೆಲವು ಶಕ್ತಿ ಗಳು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಅಂತಹ ಶಕ್ತಿಗಳ ಕುರುತು ಜನ ಎಚ್ಚರವಾಗಿರಬೇಕು’ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಸರತಿ ಸಾಲಿನಲ್ಲಿ ಸಾಗುವುದಕ್ಕಾಗಿ ಕಲ್ಪಿಸಿರುವ ಸುಧಾರಿತ ಸೌಲಭ್ಯಗಳನ್ನು ಒಳಗೊಂಡ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ವನ್ನು ಇಂದು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಗತ್ತೇ ನಮ್ಮ ದೇಶದತ್ತ ಮುಖಮಾಡಿದೆ. ಇನ್ನೊಂದೆಡೆ ಭಾರತ ವಿರೋಧಿ ಶಕ್ತಿಗಳು, ದೇಶದ ಸಾರ್ವಭೌಮ ಹಿತಾಸಕ್ತಿಯ ವಿರುದ್ಧ ಇರುವ ಶಕ್ತಿಗಳು ಹಾಗೂ ದೇಶದ ಅಭಿವೃದ್ಧಿ ಸಹಿಸದ ಶಕ್ತಿಗಳು ಒಗ್ಗೂಡುತ್ತಿವೆ. ಅವು ನಮ್ಮ ಸಾಂವಿಧಾನಿಕ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಬಯಸುತ್ತಿವೆ. ಸಾಂವಿಧಾನಿಕ ಹುದ್ದೆಗಳಿಗೆ ಕಳಂಕ ಹಚ್ಚಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.
ಬೀದಿಗಿಳಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಷ್ಟು ಕೆಳಮಟ್ಟಕ್ಕೂ ಅವರು ಇಳಿಯುತ್ತಾರೆ. ಸಾರ್ವಜನಿಕ ಸ್ವತ್ತುಗಳನ್ನೂ ನಾಶ ಪಡಿಸುತ್ತಾರೆ. ಇದು ನಾಚಿಕೆಗೇಡಿನ ವಿಷಯ. ಭಾರತದಂತ ದೇಶದಲ್ಲಿ ಇದನ್ನೆಲ್ಲ ಸಹಿಸಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಲ್ಲಿ ತೊಡಗುವವರು ದೇಶದ ಶತ್ರುಗಳು. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಅವರಿಂದಾಗಿ 145 ಕೋಟಿ ಜನ ಸಮಸ್ಯೆ ಎದುರಿಸುವುದಕ್ಕೆ ಅವಕಾಶ ನೀಡಬಾರದು. ಅಂತಹವರನ್ನು ಒಂಟಿಯಾಗಿಸಬೇಕು’ ಎಂದರು.
ರಾಜಕಾರಣಿಗಳಿಗೆ ಸಿದ್ಧಾಂತ ಮುಖ್ಯ. ಅಧಿಕಾರವೇ ರಾಜಕೀಯದ ಉದ್ದೇಶ ಆಗಬಾರದು. ದಿನದ ಇಪ್ಪತ್ತನಾಲ್ಕು ಗಂಟೆಗಳನ್ನೂ ರಾಜಕೀಯ ಲಾಭ ಗಳಿಕೆಗಾಗಿಯೆ ಬಳಸುವುದಲ್ಲ. ದೇಶಕ್ಕೆ ಸೇವೆ ಸಲ್ಲಿಸುವುದೇ ರಾಜಕಾರಣಿಗಳ ಧ್ಯೇಯವಾಗಬೇಕು’ ಎಂದರು.
ವೈವಿಧ್ಯವೇ ಭಾರತದ ವ್ಯಾಖ್ಯಾನ. ಅದೇ ದೇಶದ ಒಗ್ಗಟ್ಟಿನ ಮೂಲ. ನಾವು ಜಾಗತಿಕ ಭ್ರಾತೃತ್ವದಲ್ಲಿ ನಂಬಿಕೆ ಇಟ್ಡವರು. ಆದರೆ ಇತ್ತೀಚೆಗೆ
ಸಾಮರಸ್ಯ ಹದಗೆಡುತ್ತಿದೆ. ಸಮಾಜ ಧ್ರುವೀಕರಣಗೊಳ್ಳುತ್ತಿದೆ. ಇದನ್ನೆಲ್ಲ ನೋಡುವಾಗ ಕಳವಳವಾಗುತ್ತದೆ. ನಾವು ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. 5 ಸಾವಿರಕ್ಕೂ ಅಧಿಕ ವರ್ಷಗಳ ನಾಗರೀಕತೆ ಹೊಂದಿರುವ ದೇಶ ನಮ್ಮದು ಎಅನಬುದನ್ನುಬಮರೆಯಬಾರದು ಎಂದು ತಿಳಿಸಿದರು.
ಸಂವಾದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೆರಡೂ ಪ್ರಜಾಪ್ರಭುತ್ವದ ಜೀವಾಳ. ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಕೆ ಆದ್ಯತೆ ನೀಡಿ ಸಂವಾದ ಪ್ರಕ್ರಿಯೆಯನ್ನು ಕಡೆಗಣಿಸಿದರೆ, ಪ್ರಜಾಪ್ರಭುತ್ವದ ಆಶಯ ಈಡೆರಿಸುವಲ್ಲಿ ನಾವು ವಿಫಲವಾಗುತ್ತೇವೆ. ಸಂವಾದವು ಅಸಮಾನತೆಯಿಂದ ಮುಕ್ತಿ ನೀಡಲು ದಾರಿಯಾಗಬಲ್ಲುದು. ಸಕಾರಾತ್ಮಕ ಪ್ರಯತ್ನ ಸಮಸ್ಯೆ ಬಗೆಹರಿಸಲು ನೆರವಾಗಬಲ್ಲುದು’ ಎಂದರು.
ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳವುದು ಜನಪ್ರತಿನಿಧಿಗಳ ಸಂವಿಧಾನ ಬದ್ದ ಕರ್ತವ್ಯ. ಆದರೆ ಅವರು ಅದಕ್ಕೇ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬೇಸರ ತೋಡಿಕೊಂಡರು.
ಜನತಂತ್ರದ ದೇಗುಲವಾದ ಸಂಸತ್ತು ಜನರ ಭಾವನೆಗಳನ್ನು ಮತ್ತಷ್ಟು ಪ್ರಖರವಾಗಿ ವ್ಯಕ್ತಪಡಿಸುವ ಜೀವಂತಿಕೆಯ ತಾಣವಾಗಬೇಕು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

