Breaking News

ವಿವಿಧ ಕಾಮಗಾರಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹40 ಲಕ್ಷ ದುರುಪಯೋಗ: ಪಿಡಿಒ ಅಮಾನತು

ಹಾವೇರಿ: ಜಿಲ್ಲೆಯ ಸವಣೂರು ತಾಲ್ಲೂಕಿನ ಕುರುಬರಮಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒಟ್ಟು ₹ 40 ಲಕ್ಷ ದುರುಪಯೋಗವಾಗಿದ್ದು ಈ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಪಿಡಿಒ ಅನ್ನಪೂರ್ಣ ಸಿಂಪಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
₹ 40 ಲಕ್ಷ ಅಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರೂ ಶಾಮೀಲಾಗಿರುವ ಆರೋಪವಿರುವುದರಿಂದ, ಅವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ್ ಶ್ರೀಧರ್ ಅವರು ಸವಣೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ಕುರುಬರಮಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚಳ್ಳಾಳ ಗ್ರಾಮದಲ್ಲಿ 185ನೇ ಅಂಗನವಾಡಿ ಕಟ್ಟಡ ನಿರ್ಮಿಸಲು 2022-23ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ/ಮಹತ್ವಾಕಾಂಕ್ಷಿಯ ತಾಲ್ಲೂಕು ಯೋಜನೆ ಹಾಗೂ ಮಹಾತ್ಮ ಗಾಂಧಿ ‘ನರೇಗಾ’ ಯೋಜನೆಯಡಿ ಅನುಮೋದನೆ ನೀಡಲಾಗಿತ್ತು. ನಿಗದಿತ ದಿನದೊಳಗೆ ಕಟ್ಟಡ ನಿರ್ಮಿಸಿರುವುದಾಗಿ ಹೇಳಿ ನಕಲಿ ದಾಖಲೆ ಸೃಷ್ಟಿಸಿ ₹ 15 ಲಕ್ಷ ಡ್ರಾ ಮಾಡಿಕೊಳ್ಳಲಾಗಿತ್ತು.
ಆದರೆ, ಸ್ಥಳದಲ್ಲಿ ಯಾವುದೇ ಕಟ್ಟಡ ನಿರ್ಮಿಸಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಿಇಒ ವಿಚಾರಣೆ ಆರಂಭಿಸಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಮೂಲಕ ಮಾಹಿತಿ ಕಲೆಹಾಕಿದ್ದರು. ದಾಖಲೆಗಳ ಪರಿಶೀಲನೆ ನಡೆಸಿದಾಗ, ಪಿಡಿಒ ಹಾಗೂ ಅಧ್ಯಕ್ಷರು ಸೇರಿಕೊಂಡು ಅಂಗನವಾಡಿ ಹೆಸರಿನಲ್ಲಿ ₹ 15 ಲಕ್ಷ ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ.
ಅಮೃತ ಗ್ರಾಮ ಪಂಚಾಯಿತಿ ಯೋಜನೆ’ಯಡಿಯಲ್ಲೂ ಎರಡು ಹಂತದಲ್ಲಿ ₹ 25 ಲಕ್ಷ ಬಿಡುಗಡೆ ಮಾಡಲಾಗಿತ್ತು. ನಿಗದಿತ ಕಾಮಗಾರಿಗಳಿಗೆ ಮಾತ್ರ ಹಣ ಖರ್ಚು ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ, ಕ್ರಿಯಾಯೋಜನೆಗೆ ಅನುಮೋದನೆ ಪಡೆಯದೇ ನಿಯಮಬಾಹಿರವಾಗಿ ₹ 25 ಲಕ್ಷವನ್ನು ದುರುಪಯೋಗಪಡಿಸಿಕೊಂಡಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಸವಣೂರು ತಾಲ್ಲೂಕಿನ ಹಿರೇಮುಗದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಆಗಿರುವ ಅನ್ನಪೂರ್ಣ ಸಿಂಪಿ, ಈ ಹಿಂದೆ ಕುರುಬರಮಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದರು. ಅವರ ಅವಧಿಯಲ್ಲಿಯೇ ಹಣ ದುರುಪಯೋಗವಾಗಿದೆ. ಅನ್ನಪೂರ್ಣ ಅವರನ್ನು ಸೇವೆಯಿಂದ ಅಮಾನತು ಮಾಡಿ 2024ರ ಆಗಸ್ಟ್ 25ರಂದು ಆದೇಶ ಹೊರಡಿಸಲಾಗಿದೆ’ ಎಂದು ಜಿ.ಪಂ. ಸಿಇಒ ಅಕ್ಷಯ್ ಶ್ರೀಧರ್ ತಿಳಿಸಿದರು.
ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿರುವುದರಿಂದ ಅವರ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಿಡಿಒ ಹಾಗೂ ಅಧ್ಯಕ್ಷರು ಲಭ್ಯರಾಗಲಿಲ್ಲ.
ಹಣ ದುರುಪಯೋಗದ ಬಗ್ಗೆ ಇಲಾಖೆ ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರಿಂದ ಹಣ ವಾಪಸು ವಸೂಲಿ ಪ್ರಕ್ರಿಯೆ ಶುರುವಾಗಿದೆ ಎಂದು ಜಿ.ಪಂ.ಸಿಇಒ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *