ನವದೆಹಲಿ: ಕರ್ನಾಟಕದ ವಿವಿಧ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಇಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಹಲವಾರು ಮನವಿಗಳನ್ನು ಸಲ್ಲಿಸಿ ಆದಷ್ಟು ಬೇಗ ಕ್ರಮ ವಹಿಸುವಂತೆ ಕೋರಿದರು.
ರಾಜ್ಯದಲ್ಲಿ ಹಲವಾರು ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಆಗಬೇಕಿದ್ದು, ಆ ಬಗ್ಗೆ ಕ್ರಮ ವಹಿಸಬೇಕು ಎಂದು ಹತ್ತಕ್ಕೂ ಹೆಚ್ಚು ಯೋಜನೆಗಳ ಮನವಿ ಪತ್ರಗಳನ್ನು ಸಲ್ಲಿಸಿದರು. ಈ ಪೈಕಿ ಕೆಲ ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಗಡ್ಕರಿ ಭರವಸೆ ನೀಡಿದರು.
ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮತ್ತಿತರ ಜಿಲ್ಲೆಗಳ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಿದರು.
ಮಂಡ್ಯದ ಹೊರ ವರ್ತುಲ ರಸ್ತೆ:
ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ವಿಸ್ತರಣೆ ಮಾಡುವುದು, ಅದರ ವೈಟ್ ಟಾಪಿಂಗ್ ಹಾಗೂ ರಾಷ್ಟ್ರೀಯ ಹೆದ್ದಾರಿ-275ರಲ್ಲಿರುವ ಮಂಡ್ಯ ನಗರದ ಎಲ್ಲ ಜಂಕ್ಷನ್‌ಗಳು, ಪಾದಚಾರಿ ಮಾರ್ಗಗಳನ್ನೂ ಅಭಿವೃದ್ಧಿ ಮಾಡಬೇಕು ಎಂದು ಕುಮಾರಸ್ವಾಮಿ ಕೋರಿದರು.
ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹಳ್ಳದಿಣ್ಣೆ ಬಿದ್ದು ವಾಹನ ಸವಾರರಿಗೆ ಬಹಳಷ್ಟು ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಅಪಾಯಕಾರಿ ಆಗಿದೆ ಎಂದು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಪಾಂಡವಪುರ ಪಟ್ಟಣ, ಕಿರಂಗೂರು ಬಳಿಯ ಹೆದ್ದಾರಿ ಅಭಿವೃದ್ಧಿ ಮಾಡುವ ಬಗ್ಗೆಯೂ ಚರ್ಚೆ ನಡೆಸಿದರು.
ಆಂಧ್ರ ಪ್ರದೇಶದ ಕುಪ್ಪಂ- ಬಂಗಾರಪೇಟೆ- ಕೋಲಾರ -ಚಿಂತಾಮಣಿ; ಚಿಂತಾಮಣಿಯ ಗಜಾನನ ಸರ್ಕಲ್- ಚೇಳೂರು, ರಾಷ್ಟ್ರೀಯ ಹೆದ್ದಾರಿ 75ರಿಂದ ಹೊಸಕೋಟೆ -ಎಚ್.ಕ್ರಾಸ್- ಚಿಂತಾಮಣಿ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-49, ಹೊಸಕೋಟೆ -ಗೌನಿಪಲ್ಲಿ – ಶ್ರೀನಿವಾಸಪುರ ಮೂಲಕ ರಾಷ್ಟ್ರೀಯ ಹೆದ್ದಾರಿ-75ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋಜನೆಗಳ ಬಗ್ಗೆಯೂ ಸಚಿವರು ಗಮನ ಸೆಳೆದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

