ಚಿತ್ರದುರ್ಗ: ವಿವಿ ಸಾಗರ ಜಲಾಶಯ ಮೈದುಂಬಿಕೊಂಡಿದ್ದರೂ ಜಲರಾಶಿಯನ್ನು ಹಿಡಿದಿಟ್ಟುಕೊಂಡಿರುವ ಹೊಸದುರ್ಗ ತಾಲ್ಲೂಕಿನ ಹಿನ್ನೀರು ಪ್ರದೇಶದ ಜನರಿಗೇ ಆ ನೀರು ಸಿಕ್ಕಿಲ್ಲ. ಜಲಾಶಯಕ್ಕೆ ಮುಖ್ಯಮಂತ್ರಿ ಭೇಟಿ ನೀಡುವ ಹೊತ್ತಿನಲ್ಲಿ, ಬಾಗಿನ ಅರ್ಪಿಸುತ್ತಿರುವ ಸಂದರ್ಭದಲ್ಲಿ ಹೊಸದುರ್ಗ ತಾಲ್ಲೂಕಿನ ಜನರು ನೀರಿನ ಪಾಲು ಕೇಳುತ್ತಿದ್ದಾರೆ.
ಬಯಲುಸೀಮೆಯ ಜೀವನಾಡಿ ಎಂದೇ ಪ್ರಖ್ಯಾತಿ ಪಡೆದಿರುವ ವಿವಿ ಸಾಗರ ಜಲಾಶಯ ಕೆಳಭಾಗದಲ್ಲಿರುವ 25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ ತಾಲ್ಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುತ್ತದೆ. ಜಲಾಶಯದ ಹಿನ್ನೀರು ಪ್ರದೇಶವೇ 28,000 ಹೆಕ್ಟೇರ್ ಇದ್ದು ಅದು ಸಂಪೂರ್ಣವಾಗಿ ಹೊಸದುರ್ಗ ತಾಲ್ಲೂಕನ್ನು ಆವರಿಸಿಕೊಂಡಿದೆ. ಆದರೆ, ಇಲ್ಲಿಯವರೆಗೂ ಹೊಸದುರ್ಗ ತಾಲ್ಲೂಕಿನ ರೈತರು, ಸಾರ್ವಜನಿಕರು ಆ ನೀರು ಬಳಸಿಕೊಳ್ಳಲು ಸಾಧ್ಯವಾಗಿಲ್ಲ.
ಕಣ್ಣಮುಂದೆಯೇ ಜಲರಾಶಿ ನಿಂತಿದ್ದರೂ ಹಿನ್ನೀರು ಪ್ರದೇಶದ ರೈತರಿಗೆ ಆ ನೀರು ಬಳಸಿಕೊಳ್ಳಲು ಹಕ್ಕಿಲ್ಲದಂತಾಗಿದೆ. ಹಿನ್ನೀರಿನ ಸಮೀಪದಲ್ಲೇ ಇರುವ ಲಕ್ಕಿಹಳ್ಳಿ, ಮುತ್ತೋಡು, ಕಾರೇಹಳ್ಳಿ, ಗುಡ್ಡದನೇರಲಕೆರೆ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿಯುವ ನೀರಿಗೂ ತತ್ವಾರವಿದೆ. ಕೊಳವೆಬಾವಿ ಕೊರೆಯಿಸಿದರೂ ನೀರು ಬಾರದ ಸ್ಥಿತಿ ಇದೆ. ಪರಿಸ್ಥಿತಿ ಹೀಗಿರುವಾಗ ಸಮೀಪದಲ್ಲೇ ನಿಂತಿರುವ ವಿವಿ ಸಾಗರ ನೀರಿನಲ್ಲಿ ಹೊಸದುರ್ಗ ತಾಲ್ಲೂಕಿಗೂ ಪಾಲು ಕೊಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.
ಜ. 18ರಂದು ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಬಂದಾಗ ಹೊಸದುರ್ಗ ತಾಲ್ಲೂಕಿಗೆ ಕನಿಷ್ಠ 1 ಟಿಎಂಸಿ ಅಡಿ ನೀರು ಹಂಚಿಕೆ ಮಾಡಬೇಕು ಎಂದು ಮನವಿ ಅರ್ಪಿಸಲು ಕೆಲ ರೈತ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಕೂಡ ಪ್ರತಿಕ್ರಿಯಿಸಿದ್ದು, ಹಿನ್ನೀರು ಸಮೀಪದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಹಿನ್ನೀರಿನಲ್ಲಿ ಮುಳುಗಿರುವ ರೈತರ ಕಷ್ಟ ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಿಫಲವಾಗಿದ್ದಾರೆ’ ಎಂದು ಗೋವಿಂದಪ್ಪ ಆರೋಪಿಸಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಶಾಸಕರಲ್ಲೇ ಭಿನ್ನಾಭಿಪ್ರಾಯ ಮೂಡಿರುವುದು ರಾಜಕೀಯ ರೂಪ ಪಡೆದುಕೊಂಡಿದೆ. ಈ ಕುರಿತು ಬಿಜೆಪಿ ಮುಖಂಡ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಪ್ರತಿಕ್ರಿಯಿಸಿದ್ದು, ಗೋವಿಂದಪ್ಪ ಅವರ ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ.
ಬರಗಾಲ ಸ್ಥಿತಿಯಲ್ಲಿ ಟ್ಯಾಂಕರ್ ಮೂಲಕ ನೀರು ಕೊಂಡೊಯ್ಯಲು ಯತ್ನಿಸಿದ ಹೊಸದುರ್ಗ ತಾಲ್ಲೂಕಿನ ರೈತರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ನಮಗೆ ವಿವಿ ಸಾಗರ ನೀರಿನ ಮೇಲೆ ಹಕ್ಕು ಇಲ್ಲ ಎಂಬಂತೆ ಬಿಂಬಿಸಲಾಗಿದೆ. ಈ ಪರಿಸ್ಥಿತಿ ತೊಲಗಬೇಕು, ಮಾರಿಕಣಿವೆ ನೀರಿನ ಮೇಲೆ ನಮಗೂ ಪಾಲು ಬೇಕು’ ಎಂದು ಹೊಸದುರ್ಗ ತಾಲ್ಲೂಕಿನ ರೈತ ಮುಖಂಡ ಶೇಖರಪ್ಪ ಒತ್ತಾಯಿಸಿದರು.
ಫಲಾನುಭವಿ ಯಾರು?: ‘ನೀರು ಬಳಕೆ ವಿಚಾರದಲ್ಲಿ ಹಿರಿಯೂರು ತಾಲ್ಲೂಕಿನ ಜನರ ವಾದವೇ ಬೇರೆ ಇದೆ. ವೇದಾವತಿ ನದಿ ನೀರಿನ ಹರಿವಿನಲ್ಲಿ ವಿವಿಧೆಡೆ ಬ್ಯಾರೇಜ್ ನಿರ್ಮಾಣ ಮಾಡಿಕೊಂಡು ಹೊಸದುರ್ಗ ತಾಲ್ಲೂಕಿನ ಕೆರೆ ತುಂಬಿಸಲಾಗಿದೆ. ಕೆಲ್ಲೋಡು ಬಳಿ ಪಂಪ್‌ಹೌಸ್ ನಿರ್ಮಿಸಿ ಕುಡಿಯುವ ನೀರು ಕಲ್ಪಿಸಲಾಗಿದೆ. ಹೊಸದುರ್ಗ ತಾಲ್ಲೂಕಿನ ಜನರೇ ಹೆಚ್ಚು ನೀರು ಬಳಸಿಕೊಳ್ಳುತ್ತಿದ್ದಾರೆ. ಈಗ ವಿವಿ ಸಾಗರ ನೀರಿನಲ್ಲಿ ಪಾಲು ಕೇಳುವುದರಲ್ಲಿ ಅರ್ಥವಿಲ್ಲ’ ಎಂದು ವಾದಿಸುತ್ತಾರೆ.
ಹೊಸದುರ್ಗದ ಕೆರೆ, ಕಟ್ಟೆಗಳು ತುಂಬಿದ ನಂತರವೇ ವೇದಾವತಿ ನದಿ ನೀರು ಮಾರಿಕಣಿವೆಗೆ ಹರಿಯುತ್ತದೆ. ಜಲಾಶಯ ತುಂಬಿದ ಸಂದರ್ಭದಲ್ಲಿ, ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಹಿರಿಯೂರು ತಾಲ್ಲೂಕಿನ ರೈತ ತಿಪ್ಪೇಸ್ವಾಮಿ ತಿಳಿಸಿದರು.
ಬಾಗಿನ ಅರ್ಪಿಸುತ್ತಿರುವ ಸಂದರ್ಭದಲ್ಲಿ ಆಕ್ಷೇಪ ಸಚಿವರ ವಿರುದ್ಧ ಹೊಸದುರ್ಗ ಶಾಸಕ ಆರೋಪ ಬಯಲುಸೀಮೆಯ ಹೆಮ್ಮೆ ವಿವಿ ಸಾಗರ ಜಲಾಶಯ.
ಹೊಸದುರ್ಗ ವಿವಿ ಸಾಗರ… ವಿವಿ ಸಾಗರ ಜಲಾಶಯ ಹೊಸದುರ್ಗ ತಾಲ್ಲೂಕಿಗೆ ಸೇರಬೇಕೋ ಹಿರಿಯೂರು ತಾಲ್ಲೂಕಿಗೆ ಸೇರಬೇಕೋ ಎಂಬ ಬಗ್ಗೆ ಎರಡೂ ತಾಲ್ಲೂಕುಗಳ ಜನರಲ್ಲಿ ಗೊಂದಲವಿದೆ. ಇಲ್ಲಿಯವರೆಗೂ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಎಂದೇ ಗುರುತಿಸಲಾಗುತ್ತಿತ್ತು. ಹೊಸ ಸರ್ವೆ ಅನ್ವಯ ವಿವಿ ಸಾಗರ ಹೊಸದುರ್ಗ ತಾಲ್ಲೂಕಿಗೆ ಸೇರಬೇಕು ಎಂದು ಅಲ್ಲಿಯ ಜನರು ಮುಖಂಡರು ಹೇಳುತ್ತಾರೆ. ‘ಜಲಾಶಯವನ್ನು ವಿವಿ ಸಾಗರ ಜಲಾಶಯ ಎಂದು ಪುನರ್ ನಾಮಕರಣ ಮಾಡಬೇಕು’ ಎಂದು ಬಿಜೆಪಿ ಮುಖಂಡ ಗೂಳಿಹಟ್ಟಿ ಶೇಖರ್ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಬಿಡುಗಡೆ ಮಾಡಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಹೊಸದುರ್ಗ ಹಿರಿಯೂರು ಎರಡೂ ತಾಲ್ಲೂಕುಗಳಿಗೆ ವಿವಿ ಸಾಗರ ಸೇರಿದೆ. ಬಯಲುಸೀಮೆ ಹಾಗೂ ಚಿತ್ರದುರ್ಗ ತಾಲ್ಲೂಕಿಗೆ ಈ ಜಲಾಶಯ ಹೆಮ್ಮೆಯಾಗಿದೆ ಎಂಬುದನ್ನು ಯಾರೂ ಮರೆಯಬಾರದು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

