Breaking News

ಒಪೆಕ್‌ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ, ಕರ್ತವ್ಯ ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ: ಶರಣಪ್ರಕಾಶ್ ಪಾಟೀಲ್

ರಾಯಚೂರು : ಒಪೆಕ್ ಆಸ್ಪತ್ರೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದ ಶರಣ್‌ ಪ್ರಕಾಶ್‌ ಪಾಟೀಲ್ ಅವರು ವೈದ್ಯರನ್ನು ನಂಬಿ ಜೀವ ಕಾಪಾಡಿಕೊಳ್ಳಲು ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು. ವೈದ್ಯರು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿ, ಕರ್ತವ್ಯ ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ.ಶರಣ್‌ ಪ್ರಕಾಶ್‌ ಆರ್.ಪಾಟೀಲ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಸ್ಪತ್ರೆಯ ವೈದ್ಯರು, ತಜ್ಞ ವೈದ್ಯರು ಮತ್ತು ಸಿಬ್ಬಂದಿಯು ಸಂಜೆ ವೇಳೆ ನಿಗದಿಪಡಿಸಿದ ಅವಧಿವರೆಗೆ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ನೀಡಬೇಕು. ಆಸ್ಪತ್ರೆ ವೇಳೆಯಲ್ಲಿ ಖಾಸಗಿ ಸೇವೆ ಒದಗಿಸುವುದು ಕಂಡು ಬಂದರೆ ಸೇವೆಯಿಂದ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಅತ್ಯಾಧುನಿಕ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಹೆಚ್ಚುವರಿ ತುರ್ತು ನಿಗಾ ಘಟಕಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ಗುಣಮಟ್ಟ ಸೇವೆ ಒದಗಿಸಲು ಮತ್ತಷ್ಟು ಪ್ರಯತ್ನಗಳು ಕೈಗೊಳ್ಳಬೇಕು ಎಂದರು.
ಕಾರ್ಡಿಯೋಲಾಜಿ ಮತ್ತೆ ನೆಪ್ರೋಲಾಜಿ ಸೇರಿದಂತೆ ಕಾರ್ಯನಿರ್ವಹಿಸುತ್ತಿರುವ ತುರ್ತು ಚಿಕಿತ್ಸಾ ನಿಗಾ ಘಟಕಗಳನ್ನು ಐದಕ್ಕೆ ಹೆಚ್ಚಿಸಿ ಡಯಾಲಿಸಿಸ್, ಮಕ್ಕಳ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಂಗಳೂರು, ಹೈದರಾಬಾದ್‌ಗೆ ಕಳುಹಿಸುವುದು ತಪ್ಪಬೇಕು
ಕ್ಯಾತ್‌ ಲಾಬ್ ಸೇರಿ ಹೆಚ್ಚುವರಿ ತುರ್ತು ನಿಗಾ ಘಟಕ ಪ್ರಾರಂಭಿಸಲು ಅಂದಾಜು ಪಟ್ಟಿ ಸಲ್ಲಿಸಬೇಕು. ಹೃದಯ ಸಂಬಂಧಿ ರೋಗಿಗಳು ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌, ಬೆಂಗಳೂರಿಗೆ ರೋಗಿಗಳನ್ನು ಕಳುಹಿಸದೇ ಓಪೆಕ್ ಆಸ್ಪತ್ರೆಯಲ್ಲಿಯೇ ಲಭ್ಯವಿರುವ ಸೌಲಭ್ಯಗಳ ಮೂಲಕ ಜನರಿಗೆ ಗುಣಮಟ್ಟದ ಸೇವೆ ಒದಗಿಸಬೇಕು. ಅಗತ್ಯಬಿದ್ದರೆ ಕಲ್ಬುರ್ಗಿಯ ಜಯದೇವ ಆಸ್ಪತ್ರೆಗೆ ರವಾನಿಸಬೇಕು. ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲು ನೇಮಕಾತಿ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಓಪೆಕ್ ಆಸ್ಪತ್ರೆಯಲ್ಲಿಯೇ ಮೂತ್ರಕೋಶ ಅಳವಡಿಕೆ ವ್ಯವಸ್ಥೆ ಆರಂಭಿಸಿ ಸೌಲಭ್ಯಗಳ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತಜ್ಞ ವೈದ್ಯರು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು. ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗೆ ಬೇಕಾದ ಯಂತ್ರೋಪಕರಣ ಹಾಗೂ ಸಿಬ್ಬಂದಿ ಒದಗಿಸಬೇಕು. ದಂತ ಚಿಕಿತ್ಸೆಗೆ ಒಪೆಕ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿದೆ. ಆದ್ದರಿಂದ ಇಲ್ಲಿನ ವೈದ್ಯರ ಸೇವೆಯನ್ನು ರಿಮ್ಸನಲ್ಲಿ ಪಡೆದುಕೊಳ್ಳಲು ಯೋಜಿಸಬೇಕು ಎಂದು ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದರು.
ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ
ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯದ ಕಾಮಗಾರಿಯು ಪ್ರಗತಿಯಲ್ಲಿದೆ. ಔಷಧಿ ಉಗ್ರಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಮಾರ್ಚ್‌ ಅಂತ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸಬೇಕು. ಓಪೆಕ್ ಮತ್ತು ರಿಮ್ಸ್ ಕ್ಯಾಂಪಸ್ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಿ ಮಾಸ್ಟರ್ ಪ್ಲಾನ್ ಒಳಗೊಂಡಿರುವ ಆಕರ್ಷಣೀಯ ಸೌಲಭ್ಯ ಒದಗಿಸುವಂತೆ ಇದೆ ವೇಳೆ ಸಚಿವರು ಸೂಚಿಸಿದರು.
ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸಿಎಸ್‌ಆರ್ ಅನುದಾನದಲ್ಲಿ ಡಯಾಲಿಸಿಸ್ ಯಂತ್ರಗಳನ್ನು ನೀಡಲು ಮುಂದೆ ಬಂದಿದ್ದು, ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿ ಸೇವೆ ಪ್ರಾರಂಭ ಮಾಡಲಾಗುವುದು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದರು.
ಹೆಚ್ಚುವರಿಯಾಗಿ 4 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಇನ್ನುಳಿದ ನಾಲ್ಕು ತಾಲೂಕು ಕೇಂದ್ರಗಳಲ್ಲಿ ಅಳವಡಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ರಿಮ್ಸ್ ನಿರ್ದೇಶಕರಾದ ಡಾ.ರಮೇಶ್, ಒಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಸಾಗರ್, ರಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ್, ಹಣಕಾಸು ಅಧಿಕಾರಿ ಹನುಮೇಶ್ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಸಭೆಯಲ್ಲಿ ಇದ್ದರು.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *