ವಿಜಯಪುರ: ಅಭಿವೃದ್ಧಿಯಿಂದಾಗಿ ರೈತರ ಜಮೀನಿಗೆ ಭಾರಿ ಬೆಲೆ ಬಂದಿದ್ದು, ಅನ್ನದಾತರರು ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಿವಿಮಾತು ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ಕಟ್ಟಡ, ಎಸ್.ಡಬ್ಲ್ಯೂ.ಎಂ ಘಟಕ, ಗೋದಾಮು, ಎನ್.ಆರ್.ಎಲ್.ಎಂ ಘಟಕ ಮತ್ತು ಪ್ರೌಢಶಾಲೆ ಕಟ್ಟಡವನ್ನು ಉದ್ಘಾಟಿಸಿ ಆವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಿಂದಾಗಿ ಆರ್ಥಿಕವಾಗಿ ಸಮರ್ಥರಾಗಿರುವ ರೈತರು ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದರು.
₹100 ಕೋಟಿ ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದ ಗ್ರಾಮೀಣ ಭಾಗದ ಶಾಲೆಗಳನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ ಮಾಡಲಾಗುವುದು. ಶಾಲಾ ಆವರಣದಲ್ಲಿ ಕ್ರೀಡಾ ಸಲಕರಣೆ ವ್ಯವಸ್ಥೆ, ಅಂಗನವಾಡಿಗಳಲ್ಲಿ ಪ್ಲೆ ಸ್ಕೂಲ್ ಮಾದರಿ ಸೌಲಭ್ಯ ಒದಗಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಯುವಕರಿಗೆ ಓಪನ್ ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.
ಮತಕ್ಷೇತ್ರ ವ್ಯಾಪ್ತಿಯಲ್ಲಿ ₹319 ಕೋಟಿ ವೆಚ್ಚದಲ್ಲಿ ನೀರಾವರಿ ಬಾಕಿ ಕಾಮಗಾರಿ ಪೂರ್ಣಗೊಳಿಸಿ ಬಾಕಿ ಇರುವ 25 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು’ ಎಂದು ಅವರು ತಿಳಿಸಿದರು.
ಜಿ. ಪಂ. ಸಿಇಒ ರಿಷಿ ಆನಂದ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಆದರ್ಶ ಗ್ರಾಮ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ಸಚಿವರು ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು. ಗುರುಬಸಯ್ಯ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಈರಗೊಂಡ ಬಿರಾದಾರ, ಉಮೇಶ ಮಲ್ಲಣ್ಣವರ, ಬಾಪುಗೌಡ ಪಾಟೀಲ ಶೇಗುಣಸಿ, ರಾಮಲಿಂಗ ಕೊಕಟನೂರ, ಎಸ್. ಎಂ. ಸಜ್ಜನ, ಹಣಮಂತ ದಳವಾಯಿ, ಮುತ್ತಪ್ಪ ಶಿವಣ್ಣವರ, ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಉಪಾಧ್ಯಕ್ಷೆ ಸಂಗೀತಾ ನರಳಿ, ತಾ. ಪಂ. ಇಒ ಜೆ. ಎಸ್. ಪಠಾಣ, ಗ್ರಾಮೀಣ ವಲಯ ಬಿಇಒ ಪ್ರಮೋದಿನಿ ಬಳೂಲಮಟ್ಟಿ, ಪಿಡಿಒ ರವಿ ವೆಂಕಣ್ಣ ಮಾಸರಡ್ಡಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

